​ಪುತ್ತೂರು: 'ಪುತ್ತೂರು ಚಲೋ' ಮೆರವಣಿಗೆಯಲ್ಲಿ ಪ್ರಚೋದನಕಾರಿ ಘೋಷಣೆ ಕೂಗಿದ ಆರೋಪ — ದೂರು ದಾಖಲು

IMG-20260912-WA0000

 

ಪುತ್ತೂರು:

ಇಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ 'ಪುತ್ತೂರು ಚಲೋ' ಕಾರ್ಯಕ್ರಮದ ಮೆರವಣಿಗೆಯ ವೇಳೆ ಕೋಮು ಸೌಹಾರ್ದತೆಗೆ ಧಕ್ಕೆ ತರುವ ರೀತಿಯಲ್ಲಿ ಹಾಗೂ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದ ಆರೋಪದಡಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

​ಪ್ರಕರಣದ ಹಿನ್ನೆಲೆ:

ಆಗಸ್ಟ್ 31 ರಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆ ಸಂಘಟನೆಗಳ ಆಶ್ರಯದಲ್ಲಿ 'ಪುತ್ತೂರು ಚಲೋ' ಕಾರ್ಯಕ್ರಮ ನಡೆಯಿತ್ತು. ಪುತ್ತೂರಿನ ದರ್ಬೆಯಿಂದ ಪ್ರಮುಖ ರಸ್ತೆಯ ಮೂಲಕ ವೆಂಕಟರಮಣ ದೇವಸ್ಥಾನದ ಕಡೆಗೆ ಈ ಮೆರವಣಿಗೆ ಸಾಗುತ್ತಿತ್ತು. ಈ ಸಂದರ್ಭದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕೆಲವರು ಸ್ಥಳೀಯ ಮುಸ್ಲಿಂ ಸಮುದಾಯವನ್ನು ಲಕ್ಷ್ಯವಾಗಿಸಿಕೊಂಡು, ಪಾಕಿಸ್ತಾನ ಹಾಗೂ ಬಾಂಗ್ಲಾದೇಶಕ್ಕೆ ಹೋಲಿಸಿ ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗಿದ್ದಾರೆ ಎಂದು ಆರೋಪಿಸಲಾಗಿದೆ.

​ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್:

ಮೆರವಣಿಗೆಯಲ್ಲಿ ಕೂಗಲಾದ ಈ ಘೋಷಣೆಗಳ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದವು. ಇದನ್ನು ಗಮನಿಸಿದ ಸ್ಥಳೀಯ ವಿದ್ಯಾರ್ಥಿಯೊಬ್ಬರು, ಈ ಕೃತ್ಯವು ವಿಭಿನ್ನ ಧರ್ಮಗಳ ನಡುವೆ ವೈಮನಸ್ಸು ಹಾಗೂ ದ್ವೇಷವನ್ನು ಹುಟ್ಟುಹಾಕುವಂತಿದೆ ಮತ್ತು ಸಮಾಜದ ಶಾಂತಿಗೆ ಭಂಗ ತರುತ್ತದೆ ಎಂದು ಉಲ್ಲೇಖಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

​ಬೆಳ್ತಂಗಡಿಯ ವ್ಯಕ್ತಿ ಸೇರಿ ಹಲವರ ವಿರುದ್ಧ ಎಫ್‌ಐಆರ್:

ದೂರು ಸ್ವೀಕರಿಸಿದ ಪೊಲೀಸರು, ಪುತ್ತೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರ (DYSP) ಪೂರ್ವಾನುಮತಿ ಪಡೆದು ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ. ಪರಿಶೀಲನೆ ವೇಳೆ ಪ್ರಚೋದನಕಾರಿ ಘೋಷಣೆ ಕೂಗಿದವರಲ್ಲಿ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಬನದಬೈಲು ನಿವಾಸಿ ನಾಗೇಶ್ ಶ್ರೀನಿವಾಸ ಗೌಡ ಹಾಗೂ ಇತರರು ಭಾಗಿಯಾಗಿರುವುದು ಕಂಡುಬಂದಿದೆ.

​ಈ ಸಂಬಂಧ ನಾಗೇಶ್ ಗೌಡ ಮತ್ತು ಅವರ ಸಂಗಡಿಗರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮುಂದಿನ ಕಾನೂನು ತನಿಖೆಯನ್ನು ಚುರುಕುಗೊಳಿಸಿದ್ದಾರೆ.



image