ಕ್ರೈಂ

ಗುವಾಹಟಿ :ಪತ್ನಿಯ ಕೊಲೆಗಡುಕ ವಾಹನದಿಂದ ಜಿಗಿದು ಸಾವು: ಗುವಾಹಟಿಯಲ್ಲಿ ಬೆಚ್ಚಿಬೀಳಿಸುವ ಘಟನೆ


ಗುವಾಹಟಿ: ಪತ್ನಿಯ ಶಿರಚ್ಛೇದನ ಮಾಡಿ ಕತ್ತರಿಸಿದ ತಲೆಯನ್ನು ಫ್ರಿಡ್ಜ್‌ನಲ್ಲಿಟ್ಟಿದ್ದ ಭೀಕರ ಪ್ರಕರಣದ ಆರೋಪಿ ರಾಮಾನುಜ್ ಗೋಸ್ವಾಮಿ, ಪೊಲೀಸರ ವಶದಲ್ಲಿದ್ದಾಗಲೇ ವಾಹನದಿಂದ ಜಿಗಿದು ಸಾವನ್ನಪ್ಪಿದ್ದಾನೆ. ಸೋಮವಾರ ಬೆಳಗಿನ ಜಾವ ನಗರದ ನರಕಾಸುರ ಬೆಟ್ಟದ ಸಮೀಪ ಚಲಿಸುತ್ತಿದ್ದ ಪೊಲೀಸ್ ವಾಹನದಿಂದ ಜಿಗಿದಾಗ ತಲೆಗೆ ತೀವ್ರ ಪೆಟ್ಟು ಬಿದ್ದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಗುವಾಹಟಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

​ಘಟನೆಯ ವಿವರ ಹಾಗೂ ಹಿನ್ನೆಲೆ:

​ಕ್ಯಾಬ್ ಚಾಲಕನಾಗಿದ್ದ ರಾಮಾನುಜ್, ಕಳೆದ ವರ್ಷದ ಸೆಪ್ಟೆಂಬರ್ 22 ರಂದು ರಿಯಾ ತಾಲೂಕ್‌ದಾರ್ ಎಂಬಾಕೆಯನ್ನು ವಿವಾಹವಾಗಿದ್ದ. ಗುವಾಹಟಿಯ ಬೆಲ್ಟೋಲಾ ಪ್ರದೇಶದ ಬಸಿಸ್ಥಾಪುರದಲ್ಲಿದ್ದ ಫ್ಲಾಟ್‌ ಒಂದರಲ್ಲಿ ಈ ದಂಪತಿ ವಾಸಿಸುತ್ತಿದ್ದರು. ಸೆಪ್ಟೆಂಬರ್ 3 ರಂದು ಬೆಳಿಗ್ಗೆ ಪತ್ನಿಯ ನಡೆ-ನುಡಿಯ ಕುರಿತು ಉಂಟಾದ ಶಂಕೆಯಿಂದ ದಂಪತಿ ನಡುವೆ ತೀವ್ರ ಗಲಾಟೆ ನಡೆದಿತ್ತು. ಈ ವೇಳೆ ಆಕ್ರೋಶಗೊಂಡ ರಾಮಾನುಜ್, ಪತ್ನಿಯನ್ನು ಕೊಲೆ ಮಾಡಿ ಆಕೆಯ ಶಿರಚ್ಛೇದ ನಡೆಸಿದ್ದ. ಬಳಿಕ ಕತ್ತರಿಸಿದ ತಲೆಯನ್ನು ಫ್ರಿಡ್ಜ್‌ನಲ್ಲಿಟ್ಟು ಪರಾರಿಯಾಗಿದ್ದ.

​ಸೆಪ್ಟೆಂಬರ್ 6 ರಂದು ಆರೋಪಿ ಪೊಲೀಸರ ಮುಂದೆ ಶರಣಾಗಿದ್ದ. ತನಿಖೆ ನಡೆಸಿದ ಪೊಲೀಸರು ಆತನ ಫ್ಲಾಟ್‌ನಿಂದ ಮೃತದೇಹ ಹಾಗೂ ಕತ್ತರಿಸಿದ ಶಿರವನ್ನು ವಶಕ್ಕೆ ಪಡೆದುಕೊಂಡಿದ್ದರು.ಪಶ್ಚಾತ್ತಾಪವಿಲ್ಲ ಎಂದಿದ್ದ ಆರೋಪಿ:

​ಆರೋಪಿಗೆ ನೀಡಲಾಗಿದ್ದ ಏಳು ದಿನಗಳ ಪೊಲೀಸ್ ಕಸ್ಟಡಿ ಅವಧಿ ಭಾನುವಾರಕ್ಕೆ ಮುಕ್ತಾಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಆತನನ್ನು ನ್ಯಾಯಾಂಗ ಬಂಧನಕ್ಕಾಗಿ ಕೋರ್ಟ್‌ಗೆ ಹಾಜರುಪಡಿಸಲು ಕರೆದೊಯ್ಯಲಾಗುತ್ತಿತ್ತು.

​ಸೆಪ್ಟೆಂಬರ್ 8 ರಂದು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯುವಾಗ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಆರೋಪಿ, "ನಾನು ಮಾಡಿದ ಕೃತ್ಯಕ್ಕೆ ಯಾವುದೇ ವಿಷಾದವಿಲ್ಲ. ಜೈಲಿನಿಂದ ಹೊರಬಂದ ಮೇಲೆ ಪತ್ನಿಯ ಜೊತೆ ಸಂಬಂಧ ಹೊಂದಿದ್ದ ವ್ಯಕ್ತಿಯನ್ನೂ ಕೊಲ್ಲುತ್ತೇನೆ" ಎಂದು ಯಾವುದೇ ಭಯವಿಲ್ಲದೆ ಕ್ರೂರವಾಗಿ ಪ್ರತಿಕ್ರಿಯಿಸಿದ್ದ.

​ಮಾದಕ ದ್ರವ್ಯ ವ್ಯಸನಿ:

​ತನಿಖೆಯ ವೇಳೆ ಆರೋಪಿ ರಾಮಾನುಜ್ ತೀವ್ರ ಮಾದಕ ದ್ರವ್ಯ (ಡ್ರಗ್ಸ್) ಚಟಕ್ಕೆ ಒಳಗಾಗಿದ್ದ ಎಂಬ ಸತ್ಯ ಹೊರಬಿದ್ದಿದೆ. ಈ ಹಿಂದೆ ಆತನನ್ನು ಗುವಾಹಟಿ ಹೊರವಲಯದ ಮಾದಕ ವ್ಯಸನ ಮುಕ್ತಿ ಕೇಂದ್ರಕ್ಕೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

​ಇದೀಗ ಕೋರ್ಟ್‌ಗೆ ಕರೆದೊಯ್ಯುವ ಹಾದಿಯಲ್ಲಿ ನರಕಾಸುರ ಬೆಟ್ಟದ ಬಳಿ ಚಲಿಸುತ್ತಿದ್ದ ವಾಹನದಿಂದ ಜಿಗಿದು ಆತನ ಅಂತ್ಯವಾಗಿದೆ.



image