ದಕ್ಷಿಣ ಕನ್ನಡ

ಮಂಗಳೂರು: ಮಲ್ಲಿಕಟ್ಟೆ ಪಾರ್ಕ್‌ನಲ್ಲಿದ್ದ ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್‌ ನೆನಪಿನ ಪ್ರತಿಕೃತಿ ಕಳವು!



​ಮಂಗಳೂರು: ನಗರದ ಸಾಂಸ್ಕೃತಿಕ ಹಿರಿಮೆಗೆ ಸಾಕ್ಷಿಯಾಗಿದ್ದ ಮಲ್ಲಿಕಟ್ಟೆ ಪಾರ್ಕ್‌ನಿಂದ ಪದ್ಮಶ್ರೀ ಪುರಸ್ಕೃತ, ಖ್ಯಾತ ಸ್ಯಾಕ್ಸೋಫೋನ್ ದಿವಂಗತ ಕದ್ರಿ ಗೋಪಾಲನಾಥ್ ಅವರ ಸ್ಮರಣಾರ್ಥ ಸ್ಥಾಪಿಸಲಾಗಿದ್ದ ಸ್ಯಾಕ್ಸೋಫೋನ್ ಪ್ರತಿಕೃತಿ ಕಳವಾಗಿರುವ ಘಟನೆ ಬೆಳಕಿಗೆ ಬಂದಿದೆ.

​ಕೆಲವು ವರ್ಷಗಳ ಹಿಂದೆ ಸುಮಾರು ₹75 ಲಕ್ಷ ವೆಚ್ಚದಲ್ಲಿ ಮಲ್ಲಿಕಟ್ಟೆ ಪಾರ್ಕ್ ಅನ್ನು ಸುಸಜ್ಜಿತವಾಗಿ ಅಭಿವೃದ್ಧಿಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಕದ್ರಿ ಗೋಪಾಲನಾಥ್ ಅವರ ಕೊಡುಗೆಯನ್ನು ಸ್ಮರಿಸುವ ನಿಟ್ಟಿನಲ್ಲಿ ಪಾರ್ಕ್‌ನಲ್ಲಿ ವಿಶೇಷ ಪೀಠವೊಂದನ್ನು ನಿರ್ಮಿಸಿ, ಗಾಜಿನ ರಕ್ಷಣಾ ಕವಚದೊಳಗೆ ಸ್ಯಾಕ್ಸೋಫೋನ್ ಪ್ರತಿಕೃತಿಯನ್ನು ಅಳವಡಿಸಲಾಗಿತ್ತು. ಇದು ಪಾರ್ಕ್‌ಗೆ ಭೇಟಿ ನೀಡುತ್ತಿದ್ದ ಸಾರ್ವಜನಿಕರು ಹಾಗೂ ಪ್ರವಾಸಿಗರ ಮುಖ್ಯ ಆಕರ್ಷಣೆಯಾಗಿತ್ತು.

​ಆದರೆ, ಇತ್ತೀಚಿನ ವರ್ಷಗಳಲ್ಲಿ ಅನುದಾನದ ಕೊರತೆಯಿಂದಾಗಿ ಪಾರ್ಕ್ ನಿರ್ವಹಣೆ ಇಲ್ಲದೆ ಸಂಪೂರ್ಣ ಹಾಳುಬಿದ್ದಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ದುಷ್ಕರ್ಮಿಗಳು, ಸುಮಾರು ಒಂದು ವಾರದ ಹಿಂದೆ ಈ ಸ್ಯಾಕ್ಸೋಫೋನ್ ಪ್ರತಿಕೃತಿಯನ್ನು ಕಳವು ಮಾಡಿದ್ದಾರೆ ಎಂದು ಶಂಕಿಸಲಾಗಿದೆ.

​ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಕಾರ್ಪೊರೇಟರ್ ಕದ್ರಿ ಮನೋಹರ್ ಶೆಟ್ಟಿ ಅವರು ಕದ್ರಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ದೂರು ಆಧರಿಸಿ ಕದ್ರಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ. ಆದಾಗ್ಯೂ, ಇದುವರೆಗೆ ಆರೋಪಿಗಳ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ತಿಳಿದುಬಂದಿದೆ.



image