ಮಂಗಳೂರು : ಶ್ರೀ ದೀಪ ಸಭಾಂಗಣ ಹಾಗೂ ಶ್ರೀ ದೀಪ ಅರೇಂಜರ್ಸ್ ಸಂಸ್ಥೆಯ ಹಿರಿಯ ಮಾಲಕ, ಖ್ಯಾತ ಉದ್ಯಮಿ ಪ್ರಭಾಕರ್ ಶೆಟ್ಟಿ ಅವರು ಶನಿವಾರ ನಿಧನರಾಗಿದ್ದಾರೆ.
ತಮ್ಮ ಸರಳ ಜೀವನ, ಸಜ್ಜನಿಕೆ ಹಾಗೂ ಪ್ರೀತಿಯ ನಗುಮೊಗದ ವ್ಯಕ್ತಿತ್ವದಿಂದ ಉದ್ಯಮ ಕ್ಷೇತ್ರದಲ್ಲಿ ಪ್ರತ್ಯೇಕ ಗುರುತಿಸುವಿಕೆ ಪಡೆದಿದ್ದ ಪ್ರಭಾಕರ್ ಶೆಟ್ಟಿ ಅವರು, ಅಪಾರ ಬಂಧು ಬಳಗ ಹಾಗೂ ಗ್ರಾಹಕರ ವಲಯದಲ್ಲಿ 'ನಮ್ಮ ಶೆಟ್ರು' ಎಂದೇ ಚಿರಪರಿಚಿತರಾಗಿದ್ದರು. ಉದ್ಯಮ ರಂಗದಲ್ಲಷ್ಟೇ ಅಲ್ಲದೆ, ಸಾಮಾಜಿಕವಾಗಿಯೂ ಹಲವರ ಕಷ್ಟ-ಸುಖಗಳಿಗೆ ಸ್ಪಂದಿಸಿ, ತಮ್ಮ ಉದಾರ ಮನಸ್ಸಿನಿಂದ ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು.
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ 'ಟೀಮ್ AES' ಸೇರಿದಂತೆ ಹಲವು ಸಂಸ್ಥೆಗಳು, ಸ್ಥಳೀಯ ಗಣ್ಯರು, ವ್ಯಾಪಾರಸ್ಥರು ಹಾಗೂ ಅಪಾರ ಸಂಖ್ಯೆಯ ಹಿತೈಷಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬದವರಿಗೆ ಈ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಂತಾಪ ಸೂಚಿಸಿದ್ದಾರೆ.
