ದಕ್ಷಿಣ ಕನ್ನಡ

ಮಂಗಳೂರು: ಪಡಿಲ್‌ನ ಕಾಂಚನ ಹ್ಯುಂಡೈ ಶೋರೂಮ್‌ನಲ್ಲಿ ಬೆಂಕಿ ಅವಘಡ; ಕಾರುಗಳಿಗೆ ಹಾನಿ



ಮಂಗಳೂರು: ನಗರದ ಪಡಿಲ್‌ನಲ್ಲಿರುವ ಪ್ರಸಿದ್ಧ ‘ಕಾಂಚನ ಹ್ಯುಂಡೈ’ ಆಟೋಮೊಬೈಲ್ ಶೋರೂಮ್‌ನಲ್ಲಿ ಶುಕ್ರವಾರ ರಾತ್ರಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು, ಹಲವು ಕಾರುಗಳು ಜಖಂಗೊಂಡಿವೆ.

​ರಾತ್ರಿ ಸುಮಾರು 8 ಗಂಟೆಯ ವೇಳೆಗೆ ಶೋರೂಮ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಧಗಧಗನೆ ಹೊತ್ತಿ ಉರಿದ ಜ್ವಾಲೆಗೆ ಪ್ರದರ್ಶನಕ್ಕಿಡಲಾಗಿದ್ದ ಒಂದು ಕಾರು ಸಂಪೂರ್ಣವಾಗಿ ಭಸ್ಮವಾಗಿದ್ದರೆ, ಇನ್ನುಳಿದ ಮೂರು ಕಾರುಗಳ ಮುಂಭಾಗ ಭಾಗಶಃ ಹಾನಿಗೊಳಗಾಗಿದೆ.

​ವಿಷಯ ತಿಳಿಯುತ್ತಿದ್ದಂತೆಯೇ ತಕ್ಷಣ ಕಾರ್ಯಪ್ರವೃತ್ತರಾದ ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳಕ್ಕೆ ಧಾವಿಸಿ ಹರಸಾಹಸ ಪಟ್ಟು ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ಶೋರೂಮ್‌ನಲ್ಲಿದ್ದ ಇತರ ಹಲವಾರು ವಾಹನಗಳು ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಬೃಹತ್ ಅನಾಹುತದಿಂದ ಪಾರಾಗಿದೆ.

​


ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಸಂಭವಿಸಿರುವುದೇ ಈ ಅವಘಡಕ್ಕೆ ಮುಖ್ಯ ಕಾರಣವಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ಶಂಕಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನಿಖರ ಕಾರಣವನ್ನು ಕಂಡುಕೊಳ್ಳಲು ಪೊಲೀಸರು ಹಾಗೂ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.



image