ದಕ್ಷಿಣ ಕನ್ನಡ

ಮಂಗಳೂರು : ಉಮರ್ ಖಾಲಿದ್ ಬೆಂಬಲಿಸಿದ ಕಾಂಗ್ರೆಸ್ ಕ್ರಮ ಖಂಡನೀಯ: ಶಾಸಕ ಡಾ. ಭರತ್ ಶೆಟ್ಟಿ ಆಕ್ರೋಶ



ಮಂಗಳೂರು: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್ ಪರವಾಗಿ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕರ ನಡೆಯನ್ನು ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ವೈ ತೀವ್ರವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಈ ನಡೆ ಅವರ ದೇಶವಿರೋಧಿ ಮನಸ್ಥಿತಿ ಹಾಗೂ ತುಷ್ಟೀಕರಣ ರಾಜಕಾರಣಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಕಿಡಿಕಾರಿದ್ದಾರೆ.

​ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (NLSIU) ಯಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಎಬಿವಿಪಿ ವಿರೋಧ ವ್ಯಕ್ತಪಡಿಸಿತ್ತು. ಈ ವೇಳೆ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಉಮರ್ ಖಾಲಿದ್‌ನನ್ನು ದೇಶಭಕ್ತ ಎಂದು ಬಣ್ಣಿಸಿ ಹೇಳಿಕೆ ನೀಡಿರುವುದು ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

​ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಡಾ. ಭರತ್ ಶೆಟ್ಟಿ, ಭಯೋತ್ಪಾದನಾ ವಿರೋಧಿ ಕಾಯ್ದೆ (UAPA) ಯಡಿ ಬಂಧನಕ್ಕೊಳಗಾಗಿ, ಸುಪ್ರೀಂ ಕೋರ್ಟ್‌ನಿಂದಲೂ ಜಾಮೀನು ಪಡೆಯಲು ಸಾಧ್ಯವಾಗದ ಆರೋಪಿಯನ್ನು ದೇಶಭಕ್ತ ಎನ್ನಲು ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು. ದೇಶ ಒಡೆಯುವ ಆಲೋಚನೆ ಉಳ್ಳವರ ಪರವಾಗಿ ನಿಲ್ಲುವ ಮೂಲಕ ಕಾಂಗ್ರೆಸ್ ತನ್ನ 'ತುಕ್ಡೆ-ತುಕ್ಡೆ' ನೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ವಾಗ್ದಾಳಿ ನಡೆಸಿದರು.

​ದೇಶಭಕ್ತ ಯುವಶಕ್ತಿ ಮತ್ತು ಎಬಿವಿಪಿಯನ್ನು ಅವಮಾನಿಸಿರುವ ಬಿ.ಕೆ. ಹರಿಪ್ರಸಾದ್ ಅವರು ತಕ್ಷಣವೇ ಬಹಿರಂಗ ಕ್ಷಮೆಯಾಚಿಸಬೇಕು. ಮುಂದಿನ ದಿನಗಳಲ್ಲಿ ರಾಜ್ಯದ ಜನತೆಯೇ ಕಾಂಗ್ರೆಸ್‌ಗೆ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.



image