ಮಂಗಳೂರು: ತುಳು ಭಾಷೆಗೆ ರಾಜ್ಯದ ಎರಡನೇ ಹೆಚ್ಚುವರಿ ಅಧಿಕೃತ ಆಡಳಿತ ಭಾಷೆಯ ಸ್ಥಾನಮಾನ ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸುತ್ತಿದ್ದಂತೆ, ಕರಾವಳಿ ಭಾಗದಾದ್ಯಂತ ಹರ್ಷದ ವಾತಾವರಣ ನಿರ್ಮಾಣವಾಗಿದೆ. ಈ ಐತಿಹಾಸಿಕ ನಿರ್ಧಾರವನ್ನು ಸ್ವಾಗತಿಸಿ ಮಂಗಳೂರಿನ ಜಿಲ್ಲಾ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಕಾರ್ಯಕರ್ತರು ಬೃಹತ್ ಸಂಭ್ರಮಾಚರಣೆ ನಡೆಸಿದರು.
ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ತಮ್ಮ ಸಂತಸವನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಪಕ್ಷದ ಬಾವುಟದ ಜೊತೆಗೆ ತುಳುನಾಡಿನ ಧ್ವಜವೂ ರಾರಾಜಿಸಿದ್ದು ವಿಶೇಷವಾಗಿತ್ತು. ಕರಾವಳಿ ಜನರ ದಶಕಗಳ ಕನಸು ಹಾಗೂ ಬಹುದಿನಗಳ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ ನಾಯಕರು ಹಾಗೂ ಕಾರ್ಯಕರ್ತರು, ಸರ್ಕಾರದ ಪರವಾಗಿ ಜಯಘೋಷಗಳನ್ನು ಕೂಗಿದರು.
ತುಳು ಭಾಷೆಗೆ ಸೂಕ್ತ ಗೌರವ ಹಾಗೂ ಸ್ಥಾನಮಾನ ದೊರೆತಿರುವುದು ತುಳುನಾಡಿನ ಸಾಂಸ್ಕೃತಿಕ ಹೆಮ್ಮೆಯನ್ನು ಹೆಚ್ಚಿಸಿದೆ ಎಂದು ಹರ್ಷ ವ್ಯಕ್ತಪಡಿಸಲಾಯಿತು.
ಈ ವಿಜಯೋತ್ಸವದ ಶುಭ ಸಂದರ್ಭದಲ್ಲಿ ಪ್ರಮುಖ ಮುಖಂಡರಾದ ಪದ್ಮರಾಜ್, ಸಾಹುಲ್ ಹಮೀದ್, ಸುಭಾಷ್ ಶೆಟ್ಟಿ, ನಿರಾಜ್ ಪಾಲ್, ಶುಭೋದಯ ಆಳ್ವಾ, ಇಬ್ರಾಹಿಂ ನವಾಜ್, ಸುಧೀರ್ ಶೆಟ್ಟಿ, ಲಾರೆನ್ಸ್ ಡಿ ಸೌಝ, ಲಾವಣ್ಯ ಬಲ್ಲಾಳ್ ಹಾಗೂ ಎಸ್. ಅಪ್ಪಿ, ನಝೀರ್ ಬಜಾಲ್ ಸೇರಿದಂತೆ ಹಲವು ಪ್ರಮುಖ ನಾಯಕರು ಮತ್ತು ಅಪಾರ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು.

