ಬಂಟ್ವಾಳ: ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಚಾಲಕ ರಿವರ್ಸ್ ಚಲಾಯಿಸುತ್ತಿದ್ದ ವೇಳೆ, ದಿಮ್ಮಿಯೊಂದು ಜಾರಿಬಿದ್ದು ಕ್ಲೀನರ್ (ಕಂಡಕ್ಟರ್) ಸ್ಥಳದಲ್ಲೇ ಮೃತಪಟ್ಟ ಘಟನೆ ಬಂಟ್ವಾಳ ಕಸಬಾ ಗ್ರಾಮದ ಮಾಣಿ ಸಮೀಪ ಬುಧವಾರ (ಸೆಪ್ಟೆಂಬರ್ 9) ನಡೆದಿದೆ.
ಕೇರಳ ಮೂಲದ ಶಕೀಲ್ ಅಬ್ದುಲ್ ಅಜೀಬ್ (53) ಮೃತಪಟ್ಟ ದುರ್ದೈವಿ.
ಘಟನೆಯ ವಿವರ:
ಕೇರಳದ ಮರದ ಮಿಲ್ ಒಂದರಿಂದ ಬಂಟ್ವಾಳದ ಮಾಣಿ ಸಮೀಪದ ಮಿಲ್‌ಗೆ ಮರದ ದಿಮ್ಮಿಗಳನ್ನು ಹೊತ್ತು ತಂದಿದ್ದ ಲಾರಿಯಲ್ಲಿ ಚಾಲಕ ಯಶ ಯರಮಾಳಕರ ಹಾಗೂ ಕ್ಲೀನರ್ ಶಕೀಲ್ ಆಗಮಿಸಿದ್ದರು. ಬುಧವಾರ ಮಧ್ಯಾಹ್ನ ಮರದ ಲೋಡ್ ಅನ್‌ಲೋಡ್ ಮಾಡುವ ಮುನ್ನ ಇಬ್ಬರೂ ಊಟದ ವಿರಾಮ ಮುಗಿಸಿ ಕೆಲಸಕ್ಕೆ ಹಾಜರಾಗಿದ್ದರು.
ಆ ಬಳಿಕ ಚಾಲಕ ಹಿಂಬದಿಯನ್ನು ಗಮನಿಸದೆ ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದ ಲಾರಿಯನ್ನು ರಿವರ್ಸ್ ತೆಗೆದಿದ್ದಾನೆ. ಈ ವೇಳೆ ಲಾರಿಯಲ್ಲಿದ್ದ ಮರದ ದೊಡ್ಡ ದಿಮ್ಮಿಯೊಂದು ಜಾರಿ ಹಿಂಭಾಗದಲ್ಲಿದ್ದ ಶಕೀಲ್ ಅವರ ಮೇಲೆ ಬಿದ್ದಿದೆ.
ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಶಕೀಲ್ ಅವರನ್ನು ತಕ್ಷಣವೇ ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಸಂಪೂರ್ಣ ಅವಘಡದ ದೃಶ್ಯವು ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಚಂದಪ್ಪ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.