ದಕ್ಷಿಣ ಕನ್ನಡ

ಸುರತ್ಕಲ್: ಅಗರಮೇಲು ಶ್ರೀ ಜಾರಂದಾಯ ದೈವಸ್ಥಾನದ ಜೀರ್ಣೋದ್ದಾರ ಮನವಿ ಪತ್ರ ಬಿಡುಗಡೆ: ಮಾರ್ಚ್‌ನಲ್ಲಿ ಬ್ರಹ್ಮಕಲಶೋತ್ಸವ



ಸುರತ್ಕಲ್: ದೇವಸ್ಥಾನ ಮತ್ತು ದೈವಸ್ಥಾನಗಳ ಜೀರ್ಣೋದ್ದಾರ ಕಾರ್ಯದಲ್ಲಿ ಪ್ರತಿಯೊಬ್ಬರೂ ಭಾಗಿಯಾಗುವುದು ಧಾರ್ಮಿಕ ಕರ್ತವ್ಯವಾಗಿದೆ. ದೇವಸ್ಥಾನಗಳಿಗೆ ಹೋಲಿಸಿದರೆ ದೈವಸ್ಥಾನಗಳ ವ್ಯಾಪ್ತಿ ಅತ್ಯಂತ ವಿಶಾಲವಾದುದು. ಸೀಮೆ ದೈವ ಶ್ರೀ ಜಾರಂದಾಯನ ಅಪಾರ ಕಾರಣಿಕಕ್ಕೆ ಈ ಕ್ಷೇತ್ರದ ಇತಿಹಾಸವೇ ಸಾಕ್ಷಿಯಾಗಿದೆ ಎಂದು ಗುರುಪುರ ಶ್ರೀ ವಜ್ರದೇಹಿ ಸಂಸ್ಥಾನದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನುಡಿದರು.

​ಸುರತ್ಕಲ್‌ನ ಅಗರಮೇಲು ಶ್ರೀ ಜಾರಂದಾಯ ದೈವಸ್ಥಾನದಲ್ಲಿ ಅಂದಾಜು ₹1 ಕೋಟಿ ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿರುವ ಜೀರ್ಣೋದ್ದಾರ ಕಾರ್ಯಕ್ರಮಗಳ ಅಂಗವಾಗಿ ನಡೆದ ನೂತನ ಧ್ವಜಸ್ತಂಭಕ್ಕೆ (ಕೊಡಿಮರ) ಎಳ್ಳೆಣ್ಣೆ ಸಮರ್ಪಣೆ, ಮುಷ್ಟಿ ಕಾಣಿಕೆ ಸೇವೆ ಹಾಗೂ ಜೀರ್ಣೋದ್ದಾರ ಮನವಿ ಪತ್ರ ಬಿಡುಗಡೆ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

​ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭಕೋರಿದ ಕಟೀಲು ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಅವರು ಕ್ಷೇತ್ರದ ಜೀರ್ಣೋದ್ದಾರ ಕಾರ್ಯಕ್ಕೆ ಶುಭ ಹಾರೈಸಿದರು. ಬಳಿಕ ಮಾತನಾಡಿದ ಶಾಸಕ ಡಾ. ವೈ. ಭರತ್ ಶೆಟ್ಟಿ, ದೈವಸ್ಥಾನದ ಪುನರ್ನಿರ್ಮಾಣ ಕಾರ್ಯಕ್ಕೆ ತಮ್ಮ ಕಡೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

​ದೈವಸ್ಥಾನದ ಆಡಳಿತ ಸಮಿತಿ ಟ್ರಸ್ಟಿ ಡಾ. ಟಿ. ರಮಾನಾಥ ಶೆಟ್ಟಿ ಆರಂಭಿಕವಾಗಿ ಪ್ರಸ್ತಾವಿಕ ನುಡಿಗಳನ್ನಾಡಿದರು.

​ಈ ಧಾರ್ಮಿಕ ಸಮಾರಂಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಮಿತಿಯ ಅಧ್ಯಕ್ಷ ಚರಣ್ ಜೆ. ಶೆಟ್ಟಿ ಕುಳಾಯಿಗುತ್ತು, ಕಾರ್ಯಾಧ್ಯಕ್ಷ ಕೆ.ಪಿ.ಕೆ. ಹೆಗ್ಡೆ, ಶಂಕರ ನಾರಾಯಣ ಭಟ್, ದೈವದ ಅರ್ಚಕ ಮೋಹನ್ ಪೂಜಾರಿ, ಕಾರ್ಯದರ್ಶಿ ಜಯ ಅಮೀನ್, ಕೋಶಾಧಿಕಾರಿ ಭೋಜ ದೇವಾಡಿಗ ಸೇರಿದಂತೆ ಆಡಳಿತ ಸಮಿತಿ ಹಾಗೂ ಮಹಿಳಾ ಸಮಿತಿಯ ಪದಾಧಿಕಾರಿಗಳು ಮತ್ತು ವಿವಿಧ ಮನೆತನದ ಪ್ರಮುಖರು ಭಾಗವಹಿಸಿದ್ದರು.

​ಸ್ವರ್ಣಿಕಾ ಮತ್ತು ಆದ್ಯ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡರೆ, ಸುಧಾಕರ ಕುಲಾಲ್ ನಿರೂಪಣೆ ನಡೆಸಿಕೊಟ್ಟರು.

​ಮಾರ್ಚ್‌ನಲ್ಲಿ ಬ್ರಹ್ಮಕಲಶೋತ್ಸವ:

ಪ್ರಸ್ತಾವಿತ ಜೀರ್ಣೋದ್ದಾರ ಯೋಜನೆಯಡಿ ಧ್ವಜಸ್ತಂಭಕ್ಕೆ ಹಿತ್ತಾಳೆ ಹೊದಿಕೆ, ಗರ್ಭಗುಡಿಯ ಮುಚ್ಚಿಗೆ ಹಾಗೂ ಸುತ್ತುಗೋಡೆ ನಿರ್ಮಾಣ ಕಾಮಗಾರಿಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ. ಮುಂಬರುವ ಮಾರ್ಚ್ 20 ರಿಂದ 24 ರವರೆಗೆ ಕ್ಷೇತ್ರದಲ್ಲಿ ಅದ್ಧೂರಿ ಬ್ರಹ್ಮಕಲಶೋತ್ಸವ ಹಾಗೂ ಕಾಲಾವಧಿ ಬಂಡಿ ಉತ್ಸವ ನೆರವೇರಲಿದೆ.



image