ಸುಳ್ಯ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಸ್ಥಾಪನೆಯಾಗಿ 10 ವರ್ಷ ಪೂರೈಸಿರುವ ಶುಭ ಸಂದರ್ಭದಲ್ಲಿ, ತಾಲೂಕು ಮಟ್ಟದ ಅದ್ದೂರಿ 'ದಶ ಸಂಭ್ರಮ ಭಜನೋತ್ಸವ' ಆಯೋಜಿಸಲು ನಿರ್ಧರಿಸಲಾಗಿದೆ.
ಸ್ಥಳೀಯ ಯೋಜನಾಧಿಕಾರಿಗಳ ಸಭಾಭವನದಲ್ಲಿ ತಾಲೂಕು ಘಟಕದ ಅಧ್ಯಕ್ಷ ಸೋಮಶೇಖರ ಪೈಕ ಅವರ ಅಧ್ಯಕ್ಷತೆಯಲ್ಲಿ ಭಜನಾ ಪರಿಷತ್‌ನ ತಾಲೂಕು ಮಟ್ಟದ ಪ್ರಮುಖ ಸಭೆ ಮಂಗಳವಾರ ನಡೆಯಿತು. ಸಭೆಯಲ್ಲಿ ವಿವಿಧ ವಲಯಗಳ ಭಜನಾ ಮಂಡಳಿಯ ಪದಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನಡೆದ ಕಾರ್ಯಚಟುವಟಿಕೆಗಳ ವರದಿಯನ್ನು ಮಂಡಿಸಿದರು.
10ನೇ ವರ್ಷದ ವಿಶೇಷ ಸಂಭ್ರಮ:
ಪರಿಷತ್ 10ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ತಾಲೂಕು ಕೇಂದ್ರದಲ್ಲಿ ಒಂದು ಅಥವಾ ಎರಡು ದಿನಗಳ ಕಾಲ ಅದ್ದೂರಿ ಭಜನೋತ್ಸವ ನಡೆಸಲು ಪ್ರಾಥಮಿಕ ಸಮಾಲೋಚನೆ ನಡೆಸಲಾಯಿತು. ಕಾರ್ಯಕ್ರಮದ ಅಂತಿಮ ರೂಪುರೇಷೆ ಹಾಗೂ ದಿನಾಂಕವನ್ನು ಮುಂದಿನ ಸಭೆಯಲ್ಲಿ ಆಖೈರುಗೊಳಿಸಲು ತೀರ್ಮಾನಿಸಲಾಯಿತು.
ಇದೇ ವೇಳೆ ಭಾಗವಹಿಸಿ ಮಾತನಾಡಿದ ಭಜನಾ ಪರಿಷತ್ ರಾಜ್ಯಾಧ್ಯಕ್ಷ ಚಂದ್ರಶೇಖರ ಸಾಲ್ಯಾನ್ ಅವರು, ಕ್ಷೇತ್ರದಲ್ಲಿ ನಡೆಯಲಿರುವ ಮುಂಬರುವ ಭಜನಾ ಕಮ್ಮಟ ಹಾಗೂ ಮಂಗಲೋತ್ಸವದ ಕುರಿತು ವಿವರಣೆ ನೀಡಿದರು. ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಅಳಿಯೂರು ಮಾತನಾಡಿ, ಕಮ್ಮಟದಲ್ಲಿ ಶಿಬಿರಾರ್ಥಿಗಳ ಭಾಗವಹಿಸುವಿಕೆ ಮತ್ತು ಕ್ಷೇತ್ರದಿಂದ ನೀಡಲಾಗುವ 'ಸಾಧಕ ಭಜನಾ ಮಂಡಳಿ' ಪ್ರಶಸ್ತಿಯ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು.
ಯೋಜನಾಧಿಕಾರಿ ಮಾಧವ ಗೌಡ ಅವರು ಪರಿಷತ್‌ನ ಪದಾಧಿಕಾರಿಗಳ ಕರ್ತವ್ಯ ಹಾಗೂ ಜವಾಬ್ದಾರಿಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಪರಿಷತ್ ಗೌರವಾಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ಕಾರ್ಯದರ್ಶಿ ಸತೀಶ್ ಟಿ.ಎನ್., ನಿರ್ದೇಶಕರಾದ ನಾರಾಯಣ ಕೋಡುಗುಳಿ, ಜಯಪ್ರಕಾಶ್ ಪೆರುಮುಂಡ ಹಾಗೂ ಶ್ರೀಮತಿ ಸಂಧ್ಯಾ ಮಂಡೆಕೋಲು ಉಪಸ್ಥಿತರಿದ್ದು ಸೂಕ್ತ ಸಲಹೆ-ಸೂಚನೆಗಳನ್ನು ನೀಡಿದರು.
ಕಾರ್ಯಕ್ರಮದ ಆರಂಭದಲ್ಲಿ ಮೇಲ್ವಿಚಾರಕಿ ಶ್ರೀಮತಿ ಜಯಶ್ರೀ ಸ್ವಾಗತಿಸಿದರೆ, ಶ್ರೀಮತಿ ಸವಿತಾ ಶೆಟ್ಟಿ ವಂದಿಸಿದರು. ಸಭೆಯಲ್ಲಿ ಸುಳ್ಯ, ಸಂಪಾಜೆ, ಜಾಲ್ಲೂರು, ಗುತ್ತಿಗಾರು, ಪಂಜ, ಬೆಳ್ಳಾರೆ, ಸುಬ್ರಹ್ಮಣ್ಯ, ಅಜ್ಜಾವರ ಹಾಗೂ ನಿಂತಿಕಲ್ಲು ವಲಯಗಳ ಅಧ್ಯಕ್ಷರು, ಪದಾಧಿಕಾರಿಗಳು, ಕ್ಷೇತ್ರ ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.

