
ಬೆಳ್ತಂಗಡಿ/ಬೆಳಾಲು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾದ ‘ರಾಷ್ಟ್ರವ್ಯಾಪಿ ಆಶೀರ್ವಾದದ ದೀಪ ಸೇವಾ ಸಂಕಲ್ಪ ಅಭಿಯಾನ’ದ ಭಾಗವಾಗಿ, ಬೆಳಾಲು ಗ್ರಾಮದ ಪ್ರಸಿದ್ಧ ಶ್ರೀ ಅನಂತೋಡಿ ಅನಂತಪದ್ಮನಾಭ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಸಾಮೂಹಿಕ ತುಪ್ಪದ ದೀಪಾರಾಧನೆ ನೆರವೇರಿತು.
ಸೆಪ್ಟೆಂಬರ್ 17ರಂದು ಕ್ಷೇತ್ರದಲ್ಲಿ ನಡೆದ ವಿಶೇಷ ಸಂಕ್ರಮಣ ಪೂಜೆಯ ಶುಭ ಮುಹೂರ್ತದಲ್ಲಿ ಭಕ್ತಾದಿಗಳು ಹಾಗೂ ಮೋದಿ ಅಭಿಮಾನಿಗಳು ಸಾಮೂಹಿಕವಾಗಿ ತುಪ್ಪದ ದೀಪಗಳನ್ನು ಬೆಳಗಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಗವಂತನು ಉತ್ತಮ ಆರೋಗ್ಯ, ದೀರ್ಘಾಯುಷ್ಯ ಕರುಣಿಸಲಿ ಹಾಗೂ ಇನ್ನು ಸುದೀರ್ಘ ಕಾಲ ದೇಶವನ್ನು ಪ್ರಗತಿಯತ್ತ ಮುನ್ನಡೆಸುವ ಶಕ್ತಿ ನೀಡಲಿ ಎಂದು ಈ ಸಂದರ್ಭದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ಅರ್ಚಕರಾದ (ಅಸ್ರಣ್ಣರು) ಗಿರೀಶ್ ಬಾರಿತ್ತಾಯ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಶ್ರೀ ಸೌಧ ಬೆಳಾಲು ಶ್ರೀನಿವಾಸ್ ಗೌಡ, ಪ್ರಧಾನ ಕಾರ್ಯದರ್ಶಿ ದುರ್ಗಾ ಪ್ರಸಾದ್ ಕೆರ್ಮುಣ್ಣಾಯ ಹಾಗೂ ಕಾರ್ಯದರ್ಶಿ ಸತೀಶ್ ಗೌಡ ಎಳ್ಳುಗದ್ದೆ ಉಪಸ್ಥಿತರಿದ್ದರು.
ಅಲ್ಲದೆ, ಬಿಜೆಪಿ ಜಿಲ್ಲಾ 'ಮನ್ ಕೀ ಬಾತ್' ಸಂಯೋಜಕರಾದ ಸೀತಾರಾಮ್ ಬಿ.ಎಸ್., ಉಪಾಧ್ಯಕ್ಷರಾದ ಶ್ರೀಮತಿ ಮಮತಾ ದಿನೇಶ್ ಪೂಜಾರಿ ಉಪ್ಪಾರು, ಬೆಳ್ತಂಗಡಿ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ, ಪ್ರಮುಖರಾದ ರಂಜಿತ್ ಉಪ್ಪಾರು, ಯಶೋಧರ ಗೌಡ ಅಳಕ್ಕೆದಡ್ಡ, ರಾಜೇಶ್ ಗೌಡ ಪಾರಳ, ದಿನೇಶ್ ದರ್ಖಾಸ್, ಯಶೋಧರ ಅನಂತೋಡಿ, ಶಿವಪ್ರಸಾದ್ ಸೇರಿದಂತೆ ಹಲವಾರು ಪಕ್ಷದ ಮುಖಂಡರು, ಸ್ಥಳೀಯ ಪ್ರಮುಖರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿದ್ದರು.