ಮಂಗಳೂರು: ನಗರದ ಎಮ್ಮೆಕೆರೆ ಕ್ರಾಸ್ ಬಳಿ ಇರುವ ರಮಾಲಕ್ಷ್ಮೀ ನಾರಾಯಣ ಕನ್ವೆನ್ಷನ್ ಸಭಾಂಗಣದಲ್ಲಿ ನಡೆದ ಅನಾಹುತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿಯೊಬ್ಬ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾನೆ. ಸೆಪ್ಟೆಂಬರ್ 26ರಂದು ನಡೆದ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆ ಹಾಗೂ ಪದಗ್ರಹಣ ಸಮಾರಂಭದ ವೇಳೆ ಈ ದುರಂತ ಸಂಭವಿಸಿತ್ತು.
ಹಳೆಯಂಗಡಿ ನಿವಾಸಿ ಮಹಮ್ಮದ್ ಇಲಿಯಾಸ್ ಮೊಯಿದಿನಬ್ಬ ಅವರ 16 ವರ್ಷದ ಪುತ್ರ ಮಹಮ್ಮದ್ ಶಮ್ಮಾಝ್ ಮೃತಪಟ್ಟ ದುರ್ದೈವಿ. ಗೋಡೆ ಕುಸಿದು ಬಿದ್ದ ರಭಸಕ್ಕೆ ತಲೆಗೆ ಬಲವಾದ ಪೆಟ್ಟು ಬಿದ್ದು ಶಮ್ಮಾಝ್ ಅವರ ಮಿದುಳು ನಿಷ್ಕ್ರಿಯಗೊಂಡಿತ್ತು (ಬ್ರೇನ್ ಡೆಡ್). ನಗರದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿತ್ತಾದರೂ, ಅಂತಿಮವಾಗಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.
ಪ್ರಕರಣ ಹಿನ್ನೆಲೆ:
ಶನಿವಾರ ಮಧ್ಯಾಹ್ನ ಸಭಾಂಗಣದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ಹಾಗೂ ವಿಜೇತರ ಪದಗ್ರಹಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಭಾಂಗಣದೊಳಗೆ ಮಿತಿಮೀರಿದ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿದ್ದರಿಂದ, ಜಾಗವಿಲ್ಲದೆ ಹಲವರು ಮೊದಲ ಮಹಡಿಯ ಪ್ಯಾಸೇಜ್‌ನ ತಡೆಗೋಡೆಗೆ ಒರಗಿ ನಿಂತಿದ್ದರು. ಈ ವೇಳೆ ಸಭಾಂಗಣದ ಕಳಪೆ ತಡೆಗೋಡೆ ಏಕಾಏಕಿ ಕುಸಿದು ಬಿದ್ದಿದೆ.
ಗೋಡೆ ಕುಸಿದ ರಭಸಕ್ಕೆ ಮೇಲಿದ್ದ ಮೂವರು ವಿದ್ಯಾರ್ಥಿಗಳು ಕೆಳಗೆ ಬಿದ್ದಿದ್ದರೆ, ಕೆಳಭಾಗದಲ್ಲಿ ನಿಂತಿದ್ದ ಮತ್ತೊಬ್ಬ ವಿದ್ಯಾರ್ಥಿಯ ಮೇಲೆಯೂ ಸಿಮೆಂಟ್ ಹಂಚು ಹಾಗೂ ಕಲ್ಲುಗಳು ಬಿದ್ದಿವೆ. ಈ ಘಟನೆಯಲ್ಲಿ ಒಟ್ಟು ನಾಲ್ವರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಸೂರಿಂಜೆಯ ಮಹಮ್ಮದ್ ಶನಾನ್ ಅಹಮ್ಮದ್ (18), ಅಡ್ಯಾರ್‌ನ ಹನೀಫ್ (23), ಕಾವೂರು ಗಾಂಧಿನಗರದ ದಾವೂದ್ ಫರ್ಸಿನ್ ಅಹಮ್ಮದ್ (18) ಹಾಗೂ ಮೃತ ಮಹಮ್ಮದ್ ಶಮ್ಮಾಝ್ ಎಂದು ಗುರುತಿಸಲಾಗಿತ್ತು.
ಕಾರು ಢಿಕ್ಕಿ: ಮತ್ತೊಬ್ಬ ವಿದ್ಯಾರ್ಥಿಗೆ ಗಾಯ
ಸಭಾಂಗಣದ ಹೊರಭಾಗದ ರಸ್ತೆಯಲ್ಲಿ ಚುನಾವಣೆ ಕಾವು ಹೆಚ್ಚಿದ್ದ ಸಮಯದಲ್ಲಿ ಸಂಚರಿಸುತ್ತಿದ್ದ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಕಸಬ ಬೆಂಗ್ರೆಯ ಮಹಮ್ಮದ್ ಶಾಕೀಲ್ ಹುಸೈನ್ (18) ಎಂಬ ವಿದ್ಯಾರ್ಥಿಯೂ ಗಾಯಗೊಂಡಿದ್ದು, ಅವರಿಗೆ ಪ್ರತ್ಯೇಕವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆಯೋಜಕರು, ಮಾಲೀಕರ ವಿರುದ್ಧ ಎಫ್‌ಐಆರ್:
ವಿದ್ಯಾರ್ಥಿಯ ಸಾವಿನ ಬೆನ್ನಲ್ಲೇ ಆತನ ತಂದೆ ನೀಡಿದ ದೂರಿನನ್ವಯ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಕಾರ್ಯಕ್ರಮದ ಆಯೋಜಕರಾದ ಪರೀಕ್ಷಿತ್ ರೈ ಹಾಗೂ ದಿನಕರ ಶೆಟ್ಟಿ ಮತ್ತು ಕಟ್ಟಡದ ಮಾಲೀಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಯ ಸೆಕ್ಷನ್ 106(1) (ನಿರ್ಲಕ್ಷ್ಯದಿಂದ ಸಾವು ಉಂಟು ಮಾಡುವುದು), 125(a), 125(b) (ಇತರರ ಜೀವಕ್ಕೆ ಅಪಾಯ ತರುವುದು) ಹಾಗೂ 290 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
