ಉಡುಪಿ:
ಪ್ರಕರಣವೊಂದರಲ್ಲಿ ಜಾಮೀನು ಪಡೆಯಲು ನ್ಯಾಯಾಲಯಕ್ಕೆ ನಕಲಿ ಆಧಾರ್ ಕಾರ್ಡ್ ಸಲ್ಲಿಸಿ ವಂಚಿಸಲು ಯತ್ನಿಸಿದ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಂಟ್ವಾಳ ಮೂಲದ ಉಮ್ಮರ್ ಫಾರೂಕ್ (32) ಮತ್ತು ಮಂಗಳೂರಿನ ನಿಶಾಂತ್ ಕುಮಾರ್ (24) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ನ್ಯಾಯಾಲಯದಲ್ಲಿದ್ದ 'ನೋಮಾನ್' ಎಂಬ ಆರೋಪಿಗೆ ಜಾಮೀನು ಕೊಡಿಸುವ ಉದ್ದೇಶದಿಂದ ಉಮ್ಮರ್ ಫಾರೂಕ್ ನಕಲಿ ದಾಖಲೆ ಸೃಷ್ಟಿಸಿದ್ದ. 'ಪ್ರಶಾಂತ್' ಎಂಬವರ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು, ಅದಕ್ಕೆ 'ಕೆ.ಟಿ. ಮೊಹಮ್ಮದ್' ಎಂಬವರ ಹೆಸರು ಹಾಗೂ ವಿಳಾಸವನ್ನು ನಮೂದಿಸಿ ನಕಲಿ ಆಧಾರ್ ಕಾರ್ಡ್ ಸಿದ್ಧಪಡಿಸಿದ್ದ. ಈ ಮೂಲಕ ಬೇರೊಬ್ಬ ವ್ಯಕ್ತಿಯಂತೆ ನಟಿಸಿ, 2006ರ ಜನವರಿ 30ರಂದು ಕೋರ್ಟ್‌ಗೆ ನಕಲಿ ದಾಖಲೆ ಸಲ್ಲಿಸಿ ನ್ಯಾಯಾಲಯ ಮತ್ತು ಅಸಲಿ ಆಧಾರ್ ಕಾರ್ಡ್ ಹೊಂದಿದ್ದ ವ್ಯಕ್ತಿಗೆ ಮೋಸ ಮಾಡಲು ಯತ್ನಿಸಲಾಗಿತ್ತು.
ಈ ನಕಲಿ ಆಧಾರ್ ಕಾರ್ಡ್ ಅನ್ನು ಕಂಪ್ಯೂಟರ್ ಸಹಾಯದಿಂದ ಮಂಗಳೂರಿನ ನಿಶಾಂತ್ ಕುಮಾರ್ ಎಂಬಾತ ತಿದ್ದಿ ಸೃಷ್ಟಿಸಿಕೊಟ್ಟಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.
ಪೊಲೀಸ್ ಕಾರ್ಯಾಚರಣೆ:
ಈ ವಂಚನೆಯ ಕುರಿತು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆಡಳಿತಾಧಿಕಾರಿ ಅಬ್ಬಾಸ್ ಅವರು ನೀಡಿದ ದೂರಿನನ್ವಯ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಬಂಧನಕ್ಕಾಗಿ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಪಿ. ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪನಿರೀಕ್ಷಕ ರತ್ನಾಕರ ಕೆ. ಅವರ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ಇಬ್ಬರೂ ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದೆ.