ಕಲಬುರಗಿ/ವಾಡಿ: ಕಲಬುರಗಿ-ಗುತ್ತಿ ರಾಷ್ಟ್ರೀಯ ಹೆದ್ದಾರಿ-150ರ ಹಲಕರ್ಟಿ ಸಮೀಪ ಬುಧವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂರು ತಿಂಗಳ ಕೂಸು ಹಾಗೂ ತಾಯಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಸಂಭವಿಸಿದೆ.
ವಾಡಿ ಪಟ್ಟಣದ ಕಲಕಮ್ಮ ಬಡಾವಣೆಯ ನಿವಾಸಿ ಶರಣಮ್ಮ ಶರಣು ಸಿಂಫೆ (30) ಹಾಗೂ ಅವರ ಮೂರು ತಿಂಗಳ ಮಗು ರಾಘವೇಂದ್ರ ಸಿಂಘ ದುರಂತದಲ್ಲಿ ಪ್ರಾಣ ಕಳೆದುಕೊಂಡ ದುರ್ದೈವಿಗಳು. ಘಟನೆಯಲ್ಲಿ ಶರಣಮ್ಮ ಅವರ ಅತ್ತೆ ಸಾಬಮ್ಮ ದತ್ತು ಸಿಂಘ ಮತ್ತು ಆಟೋ ಚಾಲಕ ಖಾಜಾಪಟೇಲ್ ಅವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಯಿಂದ ಹಿಂತಿರುಗುವಾಗ ಕಾಯುತ್ತಿದ್ದ ಕಟುಕ ಸಾವು:
ಸುಮಾರು ಮೂರು ತಿಂಗಳ ಹಿಂದೆ ಸಿಜೇರಿಯನ್ ಮೂಲಕ ಮಗುವಿಗೆ ಜನ್ಮ ನೀಡಿದ್ದ ಶರಣಮ್ಮ, ಶಸ್ತ್ರಚಿಕಿತ್ಸೆಯ ಹೊಲಿಗೆ ಬಿಚ್ಚಿಸಿಕೊಳ್ಳಲು ಮಗು ಮತ್ತು ಅತ್ತೆಯೊಂದಿಗೆ ಯಾದಗಿರಿಯ ಆಸ್ಪತ್ರೆಗೆ ತೆರಳಿದ್ದರು. ಚಿಕಿತ್ಸೆ ಮುಗಿಸಿಕೊಂಡು ಆಟೋದಲ್ಲಿ ಮನೆಗೆ ವಾಪಸ್ ಬರುವಾಗ, ಹಲಕರ್ಟಿ ಬಳಿ ಎದುರಿನಿಂದ ಬಂದ ವೇಗದ ಲಾರಿಯೊಂದು ಆಟೋಗೆ ನೇರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಶರಣಮ್ಮ ಅವರು ಘಟನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತದ ತೀವ್ರತೆಗೆ ಆಟೋ ಸಂಪೂರ್ಣವಾಗಿ ನುಜ್ಜುಗುಜ್ಜಾಗಿತ್ತು. ರಕ್ತದ ಮಡುವಿನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಮಗು ಹಾಗೂ ಗಾಯಾಳು ಸಾಬಮ್ಮ ಅವರನ್ನು ಸ್ಥಳೀಯ ಮುಖಂಡ ವಿಠಲ್ ವಾಲ್ಮೀಕ್ ನಾಯಕ ಅವರು ತಕ್ಷಣವೇ ತಮ್ಮ ಕಾರಿನಲ್ಲಿ ಸಮುದಾಯ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರಾದರೂ, ತೀವ್ರವಾಗಿ ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆಯಿತು.
ಏಕಮುಖ ಸಂಚಾರವೇ ಅಪಘಾತಕ್ಕೆ ಕಾರಣ:
ರಾಷ್ಟ್ರೀಯ ಹೆದ್ದಾರಿಯ ಒಂದು ಬದಿಯಲ್ಲಿ ದುರಸ್ತಿ ಕಾಮಗಾರಿ ನಡೆಯುತ್ತಿದ್ದುದರಿಂದ ವಾಹನಗಳ ಸಂಚಾರಕ್ಕೆ ಒಂದೇ ರಸ್ತೆಯನ್ನು ಬಳಸಲಾಗುತ್ತಿತ್ತು. ಒಂದೇ ಮಾರ್ಗದಲ್ಲಿ ಎರಡೂ ವಾಹನಗಳು ಮುಖಾಮುಖಿ ಬಂದಿದ್ದರಿಂದ ಈ ಭೀಕರ ದುರಂತ ಸಂಭವಿಸಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ವಾಡಿ ಪಿಎಸ್‌ಐ ತಿರುಮಲೇಶ ಕೆ. ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಹೆದ್ದಾರಿಯಲ್ಲಿ ಸಾಲು ಸಾಲು ಅಪಘಾತ:
ವಾಡಿ-ನಾಲವಾರ ರಾಷ್ಟ್ರೀಯ ಹೆದ್ದಾರಿ ದಿನದಿಂದ ದಿನಕ್ಕೆ ಸಾವಿನ ಹೆದ್ದಾರಿಯಾಗಿ ಬದಲಾಗುತ್ತಿದ್ದು, ಪದೇ ಪದೇ ಅಪಘಾತಗಳು ಸಂಭವಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಮೇ 23 ರಂದು ಸಹ ಇದೇ ಮಾರ್ಗದಲ್ಲಿ ಲಾರಿ ಮತ್ತು ಕ್ರೂಸರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಂಗಳಗಿ ಗ್ರಾಮದ ಒಂದೇ ಕುಟುಂಬದ ಐವರು ದುರ್ಮರಣಕ್ಕೀಡಾಗಿದ್ದರು. ರಸ್ತೆ ದುರಸ್ತಿ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
