ದಕ್ಷಿಣ ಕನ್ನಡ

ಉಜಿರೆ : ಉಜಿರೆಯಲ್ಲಿ ಮಹಿಳೆಯರಿಗಾಗಿ ಉಚಿತ ಟೈಲರಿಂಗ್ ತರಬೇತಿ ಶಿಬಿರ ಉದ್ಘಾಟನೆ: ಸ್ವಾವಲಂಬಿ ಜೀವನಕ್ಕೆ ಸಬಲಿನಿ ಆಸರೆ

In-Shot-20260911-131109638

 

ಉಜಿರೆ: ಮಹಿಳೆಯರ ಆರ್ಥಿಕ ಸಬಲೀಕರಣ ಹಾಗೂ ಸ್ವಯಂ ಉದ್ಯೋಗವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸೇವಾಭಾರತಿ (ರಿ.), ಕನ್ಯಾಡಿ ಸಂಸ್ಥೆಯ ‘ಸಬಲಿನಿ’ ಯೋಜನೆಯಡಿ 38ನೇ ಉಚಿತ ಟೈಲರಿಂಗ್ ತರಬೇತಿ ಶಿಬಿರಕ್ಕೆ ಉಜಿರೆಯ ಸಂಜೀವಿನಿ ಕಟ್ಟಡದಲ್ಲಿ ಚಾಲನೆ ನೀಡಲಾಯಿತು.

​ಈ ಉಚಿತ ತರಬೇತಿ ಶಿಬಿರವನ್ನು ಸೇವಾಭಾರತಿಯೊಂದಿಗೆ ಬೆಳ್ತಂಗಡಿ ಲಯನ್ಸ್ ಕ್ಲಬ್, ಉಜಿರೆಯ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟ (ರಿ.), ಮಹಾತ್ಮಾ ಗಾಂಧಿ ಗ್ರಾಮ ಪಂಚಾಯತ್ ಉಜಿರೆ ಹಾಗೂ ಕನ್ಯಾಡಿಯ ಶ್ರೀ ದುರ್ಗಾಮಾತೃ ಮಂಡಳಿ ಜಂಟಿಯಾಗಿ ಆಯೋಜಿಸಿವೆ.

​ಸ್ವಾವಲಂಬಿ ಬದುಕಿಗೆ ಕೌಶಲ್ಯವೇ ಅಡಿಪಾಯ:

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ರಘುರಾಮ ಶೆಟ್ಟಿ 'ಸಾಧನಾ', "ಟೈಲರಿಂಗ್ ತರಬೇತಿಯು ಬರಿ ಕಲೆಯಷ್ಟೇ ಅಲ್ಲ, ಅದು ಮಹಿಳೆಯರು ಸ್ವತಂತ್ರವಾಗಿ ಜೀವನ ನಡೆಸಲು ಮತ್ತು ಆರ್ಥಿಕವಾಗಿ ಸಬಲರಾಗಲು ಉತ್ತಮ ಅವಕಾಶವಾಗಿದೆ. ಮಹಿಳೆಯರು ಈ ಕೌಶಲ್ಯವನ್ನು ಸರಿಯಾಗಿ ಬಳಸಿಕೊಂಡು ಸ್ವಾವಲಂಬಿಗಳಾಗಬೇಕು," ಎಂದು ಶುಭ ಹಾರೈಸಿದರು.

​ಕಲಿಯುವ ಆಸಕ್ತಿಯೇ ಯಶಸ್ಸಿನ ಸೂತ್ರ:

ಸೇವಾಭಾರತಿ ಅಧ್ಯಕ್ಷರು ಹಾಗೂ ಸೇವಾಧಾಮದ ಸಂಸ್ಥಾಪಕರಾದ ಕೆ. ವಿನಾಯಕ ರಾವ್ ಅಧ್ಯಕ್ಷೀಯ ಭಾಷಣ ಮಾಡಿ, "ಯಾವುದೇ ರಂಗದಲ್ಲಿ ಯಶಸ್ಸು ಗಳಿಸಲು ದೊಡ್ಡ ಅವಕಾಶಗಳಿಗಿಂತ ಕಲಿಯುವ ಮನಸ್ಸು ಮತ್ತು ಆಸಕ್ತಿ ಪ್ರಮುಖವಾದದ್ದು. ತರಬೇತಿಯನ್ನು ಗಂಭೀರವಾಗಿ ಪರಿಗಣಿಸಿ, ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು," ಎಂದು ಕರೆ ನೀಡಿದರು.

​ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಹಿಳೆಯರ ಉದ್ಯಮಶೀಲತೆ ಹಾಗೂ ಕೌಶಲ್ಯ ಅಭಿವೃದ್ಧಿಗೆ ಪಂಚಾಯತ್ ಮಟ್ಟದಲ್ಲಿ ಅಗತ್ಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

IMG-20260911-WA0007

​ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು:

ಸಮಾರಂಭದಲ್ಲಿ ಉಜಿರೆ ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ವಿನುತಾ ರಜತ್ ಗೌಡ, ಬೆಳ್ತಂಗಡಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಲಯನ್ ಅಮಿತಾನಂದ ಹೆಗ್ಡೆ, ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಪುಷ್ಪವತಿ ಹಾಗೂ ಉಷಾ ಕಿರಣ್ ಕಾರಂತ್, ಬೆಳ್ತಂಗಡಿ ತಾಲೂಕು ಕೃಷಿಯೇತರ ವ್ಯವಸ್ಥಾಪಕ ನಿತೀಶ್ ಉಜಿರೆ, ಶ್ರೀ ದುರ್ಗಾಮಾತೃ ಮಂಡಳಿಯ ಅಧ್ಯಕ್ಷೆ ಮಮತಾ ಬಿ. ಮತ್ತು ತರಬೇತುದಾರೆ ಲಲಿತ ಉಪಸ್ಥಿತರಿದ್ದರು.

ಈ ತರಬೇತಿ ಶಿಬಿರದಲ್ಲಿ ಒಟ್ಟು 66 ಮಹಿಳೆಯರು ಭಾಗವಹಿಸುತ್ತಿದ್ದಾರೆ. ಪ್ರೇರಣಾ ಸಂಜೀವಿನಿ ಮಹಿಳಾ ಒಕ್ಕೂಟದ ಶಾಶ್ವಿತ ಸ್ವಾಗತಿಸಿದರೆ, ಸಂಧ್ಯಾ ಕಾರ್ಯಕ್ರಮ ನಿರೂಪಿಸಿದರು. ಭಾಗೀರಥಿ ವಂದಿಸಿದರು.


image