ದಕ್ಷಿಣ ಕನ್ನಡ

ಬೆಳ್ತಂಗಡಿ/ಕೊಯ್ಯೂರು : ಮಲೆಬೆಟ್ಟಿನಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಹಾಗೂ ದಶಮಾನೋತ್ಸವ ಸಂಭ್ರಮ: ವಿವಿಧ ಕಾರ್ಯಕ್ರಮಗಳ ವಿಜೃಂಭಣೆ

ಬೆಳ್ತಂಗಡಿ/ಕೊಯ್ಯೂರು:

ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಮಲೆಬೆಟ್ಟು (ಕೊಯ್ಯೂರು ಗ್ರಾಮ, ಬೆಳ್ತಂಗಡಿ ತಾಲೂಕು) ಇದರ ಆಶ್ರಯದಲ್ಲಿ ಶ್ರೀ ವನದುರ್ಗಾ ಪ್ರಸನ್ನ ಆಶೀರ್ವಾದದೊಂದಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ ಹಾಗೂ 10ನೇ ವರ್ಷದ 'ದಶಮಾನೋತ್ಸವ' ಸಂಭ್ರಮವು ನಿನ್ನೆ (ಸೆಪ್ಟೆಂಬರ್ 06, ಭಾನುವಾರ) ಮಲೆಬೆಟ್ಟು ಶ್ರೀ ವನದುರ್ಗಾ ದೇವಸ್ಥಾನದ ವಠಾರದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಬೆಳಿಗ್ಗೆ 8:00 ಗಂಟೆಯಿಂದ ಸಾರ್ವಜನಿಕರಿಗಾಗಿ ಹಾಗೂ ಶಾಲಾ ಮಕ್ಕಳಿಗಾಗಿ ವಿವಿಧ ಕ್ರೀಡಾ ಮತ್ತು ಆಟೋಟ ಸ್ಪರ್ಧೆಗಳು ಜರುಗಿದವು. ಇದರೊಂದಿಗೆ ಭಕ್ತಿಭಾವದ ಭಜನೆ ಕಾರ್ಯಕ್ರಮವೂ ವಿಜೃಂಭಣೆಯಿಂದ ನಡೆಯಿತು. ಸಂಜೆ 4:00 ಗಂಟೆಗೆ ಮುದ್ದು ಕೃಷ್ಣ ಹಾಗೂ ಬಾಲಕೃಷ್ಣ ವೇಷಭೂಷಣ ಸ್ಪರ್ಧೆಗಳು ನಡೆದು ನೆರೆದಿದ್ದವರ ಗಮನ ಸೆಳೆದವು.



ಸಮಾರೋಪ ಹಾಗೂ ಸನ್ಮಾನ ಸಮಾರಂಭ:

ಸಂಜೆ ನಡೆದ ಸಭಾ ಕಾರ್ಯಕ್ರಮ ಮತ್ತು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷರಾದ ಶ್ರೀ ಗಿರೀಶ್ ಆಚಾರ್ಯ ವಹಿಸಿದ್ದರು. ಕಾರ್ಯಕ್ರಮವನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶ್ರೀ ಮಾಧವ ಗೌಡ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಶ್ರೀ ಹರೀಶ್ ಪೂಂಜ, ಧಾರ್ಮಿಕ ಮುಖಂಡರಾದ ಶ್ರೀ ಕಿರಣ್‌ಚಂದ್ರ ಡಿ. ಪುಷ್ಪಗಿರಿ, ಗ್ರಾ.ಪಂ. ಕೊಯ್ಯೂರು ಪಿಡಿಒ ಶ್ರೀ ಪರಮೇಶ್ವರ ಹಾಗೂ ಗ್ರಾಮಾಧಿಕಾರಿ ಶ್ರೀ ಸಂತೋಷ್ ಕುಮಾರ್ ಭಾಗವಹಿಸಿದ್ದರು. ಗೌರವ ಉಪಸ್ಥಿತಿಯಲ್ಲಿ ಪಿಡಬ್ಲ್ಯೂಡಿ ಗುತ್ತಿಗೆದಾರರಾದ ಶ್ರೀ ಗುಣಕರ್ ರೈ, ಮೇಲ್ವಿಚಾರಕರಾದ ಶ್ರೀಮತಿ ಮಲ್ಲಿಕಾ, ಹಾಗೂ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಗಣೇಶ್ ಭಟ್ ಕಾಂತಾಜೆ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 10 ಮಂದಿ ಸಾಧಕರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು.




ಸಾಂಸ್ಕೃತಿಕ ಕಾರ್ಯಕ್ರಮ:

ರಾತ್ರಿ ಪಿಂಗಾರ ಕಲಾವಿದರ ಬೆದ್ರ ತಂಡದಿಂದ 'ಓಂಕಾರ' ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡಿತು. ತದನಂತರ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು ಎಂದು ಕಾರ್ಯದರ್ಶಿ ಶ್ರೀ ಗಿರೀಶ್ ಗೌಡ ಕೋಡಿಯೇಲು ಹಾಗೂ ಸಮಿತಿಯ ಸದಸ್ಯರು ತಿಳಿಸಿದ್ದಾರೆ.



image