ಕ್ರೈಂ

ಬಂಟ್ವಾಳ: ಬೀಗ ಮುರಿದು ಮನೆಗೆ ನುಗ್ಗಿದ ಕಳ್ಳರು; ಚಿನ್ನಾಭರಣ, ನಗದು ದೋಚಿ ಪರಾರಿ



ಬಂಟ್ವಾಳ: ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಕಳ್ಳರು ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ದೋಚಿರುವ ಘಟನೆ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದಲ್ಲಿ ನಡೆದಿದೆ.

​ಗ್ರಾಮದ ನಿವಾಸಿ ಪ್ರಪುಲ್ಲಾ ಜಾನೆಟ್ ಡಿ’ಕ್ರೂಸ್ ಎಂಬವರ ಮನೆಯಲ್ಲಿ ಈ ಕಳವು ಸಂಭವಿಸಿದೆ. ಸೆಪ್ಟೆಂಬರ್ 14ರಂದು ಸಂಜೆ ಪ್ರಪುಲ್ಲಾ ಅವರು ಮಕ್ಕಳೊಂದಿಗೆ ಬೆಳ್ಳಾರೆಗೆ ತೆರಳಿದ್ದರು. ಮರುದಿನ (ಸೆ.15) ಬೆಳಿಗ್ಗೆ ಮನೆಗೆ ವಾಪಸ್‌ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.

​ಮನೆಯೊಳಗೆ ಪರಿಶೀಲಿಸಿದಾಗ ಬೆಡ್‌ರೂಮ್‌ನ ವಾರ್ಡ್‌ರೋಬ್ ಬಾಗಿಲು ತೆರೆದು ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿತ್ತು. ವಾರ್ಡ್‌ರೋಬ್‌ನಲ್ಲಿರಿಸಿದ್ದ ಸುಮಾರು 40,000 ರೂ. ಮೌಲ್ಯದ 4 ಗ್ರಾಂ ತೂಕದ ಎರಡು ಜೊತೆ ಚಿನ್ನದ ಕಿವಿಯೋಲೆ ಹಾಗೂ ಸೋಫಾದ ಮೇಲಿದ್ದ ಡಬ್ಬದಲ್ಲಿದ್ದ 5,000 ರೂ. ನಗದನ್ನು ಕಳ್ಳರು ದೋಚಿದ್ದಾರೆ.

​ಖದೀಮರು ಮನೆಯ ಹಿಂಭಾಗದ ವರ್ಕ್ ಏರಿಯಾದಲ್ಲಿದ್ದ ಕಬ್ಬಿಣದ ಬಾಗಿಲಿನ ಬೀಗ ಮುರಿದು, ಬಳಿಕ ಮರದ ಬಾಗಿಲನ್ನು ಒಡೆದು ಒಳಪ್ರವೇಶಿಸಿ ಕೃತ್ಯ ಎಸಗಿದ್ದಾರೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.



image