ಬಂಟ್ವಾಳ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬರ ಮೇಲೆ ತಲವಾರು ಹಾಗೂ ಕಬ್ಬಿಣದ ರಾಡ್‌ನಿಂದ ಭೀಕರವಾಗಿ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಮ್ಮುಂಜೆ ನಿವಾಸಿ ಪ್ರಶಾಂತ್ (38), ತೆಂಕಬೆಳ್ಳೂರು ನಿವಾಸಿ ರಾಮದಾಸ್ (43) ಹಾಗೂ ಬಡಗಬೆಳ್ಳೂರು ನಿವಾಸಿ ಶಂಕರ (45) ಬಂಧಿತ ಆರೋಪಿಗಳು.
ಘಟನೆಯ ಹಿನ್ನೆಲೆ:
ತೆಂಕಬೆಳ್ಳೂರು ಗ್ರಾಮದ ಕಮ್ಮಾಜೆ ನಿವಾಸಿ ಪ್ರಶಾಂತ್ ಬೆಳ್ಳಾಡ್ (41) ಎಂಬವರು ಸೆಪ್ಟೆಂಬರ್ 20ರಂದು ಸಂಜೆ ತಮ್ಮ ಊರಿನಲ್ಲಿ ಇದ್ದಾಗ, ಆಟೋರಿಕ್ಷಾದಲ್ಲಿ ಬಂದ ಈ ಮೂವರು ಆರೋಪಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಪೂರ್ವಾಪರ ಪರಿಚಯವಿದ್ದ ಈ ಆರೋಪಿಗಳು ತಂದಿದ್ದ ತಲವಾರು ಮತ್ತು ಕಬ್ಬಿಣದ ರಾಡ್‌ನಿಂದ ಪ್ರಶಾಂತ್ ಅವರ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.
ಈ ವೇಳೆ ತೀವ್ರ ರಕ್ತಗಾಯಗೊಂಡ ಪ್ರಶಾಂತ್ ಬೆಳ್ಳಾಡ್ ಅವರನ್ನು ತಕ್ಷಣವೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಪರಿಚಯಸ್ಥರು ಓಡೋಡಿ ಬರುವುದನ್ನು ಗಮನಿಸಿದ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದರು.
ಪೋಲಿಸ್ ಕಸ್ಟಡಿಗೆ ಆರೋಪಿಗಳು:
ಈ ಭೀಕರ ದಾಳಿ ಕುರಿತು ಸಂತ್ರಸ್ತರು ನೀಡಿದ ದೂರಿನನ್ವಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಕಾಯ್ದೆಯಡಿ (ಪ್ರಕರಣ ಸಂಖ್ಯೆ: 124/2026, ಕಲಂ 109, 352, 351 ಹಾಗೂ 3(5)) ಪ್ರಕರಣ ದಾಖಲಾಗಿತ್ತು.
ಘಟನೆಯ ತನಿಖೆ ಚುರುಕುಗೊಳಿಸಿದ ಪೊಲೀಸರು, ಪರಾರಿಯಾಗಿದ್ದ ಮೂವರೂ ಆರೋಪಿಗಳನ್ನು ವಶಕ್ಕೆ ಪಡೆದು ಸೆಪ್ಟೆಂಬರ್ 25ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದ ತೀವ್ರತೆಯನ್ನು ಪರಿಗಣಿಸಿ ನ್ಯಾಯಾಲಯವು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶಿಸಿದೆ.
