ದಕ್ಷಿಣ ಕನ್ನಡ

ಬೆಳ್ತಂಗಡಿ : ಎಕ್ಸೆಲ್ ಟೆಕ್ನೋ ಸ್ಕೂಲ್‌ನಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ: 'ಗೋಕುಲದ ಗೋಪಾಲ' ಸ್ಪರ್ಧೆಯಲ್ಲಿ ಸ್ಮಯ ಕೋಟ್ಯಾನ್ ಪ್ರಥಮ



ಬೆಳ್ತಂಗಡಿ: ಗುರುವಾಯನಕೆರೆಯ ಪ್ರಸಿದ್ಧ ಎಕ್ಸೆಲ್ ಟೆಕ್ನೋ ಸ್ಕೂಲ್‌ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ 'ಗೋಕುಲದ ಗೋಪಾಲ' ಛಾಯಾಚಿತ್ರ/ವೇಷಭೂಷಣ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ಬಳಂಜದ ಕಂದಮ್ಮ ಸ್ಮಯ ಎಸ್. ಕೋಟ್ಯಾನ್ ಪ್ರಥಮ ಸ್ಥಾನ ಗಳಿಸಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

​ತಾಲೂಕಿನಾದ್ಯಂತ ಹಲವಾರು ಮಕ್ಕಳು ಈ ಸ್ಪರ್ಧೆಯಲ್ಲಿ ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಪುಟ್ಟ ಕಂದಮ್ಮಗಳು ಶ್ರೀಕೃಷ್ಣನ ವಿವಿಧ ಬಾಲಲೀಲೆ ಹಾಗೂ ಆಕರ್ಷಕ ಗೋಪಾಲನ ವೇಷಭೂಷಣಗಳ ಮೂಲಕ ಎಲ್ಲರ ಗಮನ ಸೆಳೆದರು.

​


ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, "ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ, ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡುವುದು ನಮ್ಮ ಸಂಸ್ಥೆಯ ಆಶಯವಾಗಿದೆ. ಇಂತಹ ಸಾಂಸ್ಕೃತಿಕ ಹಾಗೂ ಪೌರಾಣಿಕ ಹಿನ್ನೆಲೆಯ ಸ್ಪರ್ಧೆಗಳು ಮಕ್ಕಳಲ್ಲಿ ಸೃಜನಶೀಲತೆ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ" ಎಂದು ಹೇಳಿದರು.

​ಪ್ರಥಮ ಪ್ರಶಸ್ತಿ ಪಡೆದ ಸ್ಮಯ ಎಸ್. ಕೋಟ್ಯಾನ್ ಅವರು ಎಕ್ಸೆಲ್ ಟೆಕ್ನೋ ಸ್ಕೂಲ್‌ನ ದ್ವಿತೀಯ ತರಗತಿಯ ವಿದ್ಯಾರ್ಥಿನಿಯಾಗಿದ್ದು, ಪತ್ರಕರ್ತ ಸಂತೋಷ್ ಪಿ. ಕೋಟ್ಯಾನ್ ಬಳಂಜ ಹಾಗೂ ಅಮೃತ ಎಸ್. ಕೋಟ್ಯಾನ್ ದಂಪತಿಯ ಪುತ್ರಿಯಾಗಿದ್ದಾರೆ.

​ಈ ವರ್ಣರಂಜಿತ ಕಾರ್ಯಕ್ರಮವು ಮಕ್ಕಳಲ್ಲಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸುವುದರ ಜೊತೆಗೆ ಭಾರತೀಯ ಸಂಸ್ಕೃತಿ ಮತ್ತು ಪೌರಾಣಿಕ ಪರಂಪರೆಯನ್ನು ಪರಿಚಯಿಸುವಲ್ಲಿ ಯಶಸ್ವಿಯಾಯಿತು.

​


ಕಾರ್ಯಕ್ರಮದ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ಡಾ. ನವೀನ್ ಕುಮಾರ್ ಮರಿಕೆ, ಪ್ರಮುಖರಾದ ಪ್ರಜ್ವಲ್ ಕಾವೆ, ಸುಮಿತ್ರಾ ಗೌಡ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.



image