ಕ್ರೈಂ

ವೇಣೂರು: ಮಹಿಳೆಗೆ ಜಾತಿನಿಂದನೆ, ಬೆದರಿಕೆ ಹಾಕಿದ್ದ ಆರೋಪಿ ಪೊಲೀಸ್ ವಶಕ್ಕೆ!



ವೇಣೂರು: ಪರಿಶಿಷ್ಟ ಜಾತಿಯ ಮಹಿಳೆಯೊಬ್ಬರಿಗೆ ಅಸಭ್ಯ ಶಬ್ದಗಳಿಂದ ನಿಂದಿಸಿ, ಜೀವ ಬೆದರಿಕೆಯೊಡ್ಡಿ ಅಂದಾಜು ₹1.30 ಲಕ್ಷ ಮೌಲ್ಯದ ಕೃಷಿ ಆಸ್ತಿಪಾಸ್ತಿಗೆ ಹಾನಿ ಎಸಗಿದ್ದ ಆರೋಪಿಯನ್ನು ವೇಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

​ಬೆಳ್ತಂಗಡಿ ತಾಲೂಕಿನ ಹೊಸಂಗಡಿ ಗ್ರಾಮದ ನಿವಾಸಿ ಹನೀಫ್ ಬಂಧಿತ ಆರೋಪಿ.

​ಘಟನೆಯ ವಿವರ:

ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಮಹಿಳೆಯೊಬ್ಬರು ಸೆಪ್ಟೆಂಬರ್ 7ರಂದು ತಮ್ಮ ಜಮೀನಿನಲ್ಲಿ ಇತರ ಕೆಲಸಗಾರರೊಂದಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು. ಈ ವೇಳೆ ಸ್ಥಳಕ್ಕೆ ಅಕ್ರಮವಾಗಿ ಅತಿಕ್ರಮಣ ಪ್ರವೇಶ ಮಾಡಿದ ಆರೋಪಿ ಹನೀಫ್, ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೆ, ಜಾತಿನಿಂದನೆ ಮಾಡಿ, ಪ್ರಾಣ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಇದಷ್ಟೇ ಅಲ್ಲದೆ ಜಮೀನಿನಲ್ಲಿದ್ದ ಕೃಷಿ ಬೆಳೆ ಹಾಗೂ ಬೇಲಿಯನ್ನು ನಾಶಪಡಿಸಿ, ಸುಮಾರು 1,30,000 ರೂಪಾಯಿ ನಷ್ಟ ಉಂಟುಮಾಡಿದ್ದಾನೆ ಎನ್ನಲಾಗಿದೆ.

​ಪ್ರಕರಣ ದಾಖಲು, ನ್ಯಾಯಾಂಗ ಬಂಧನ:

ಈ ಕೃತ್ಯದ ಕುರಿತು ಸಂತ್ರಸ್ತ ಮಹಿಳೆ ಸೆಪ್ಟೆಂಬರ್ 8ರಂದು ವೇಣೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಅಪರಾಧ ಕ್ರಮಾಂಕ 63/2026ರಡಿಯಲ್ಲಿ ಬಿ.ಎನ್.ಎಸ್. (BNS) 2023ರ ವಿವಿಧ ಕಾಯ್ದೆಗಳು ಹಾಗೂ ಎಸ್‌ಸಿ/ಎಸ್‌ಟಿ (SC/ST) ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು.

​ಪ್ರಕರಣದ ತನಿಖೆ ಕೈಗೆತ್ತಿಕೊಂಡ ವೇಣೂರು ಪೊಲೀಸರು ಆರೋಪಿ ಹನೀಫ್‌ನನ್ನು ಸುಪರ್ದಿಗೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.



image