ಮಡಂತ್ಯಾರು:
ಇಲ್ಲಿನ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ ಇದರ ಆಶ್ರಯದಲ್ಲಿ ಕಳೆದ 56 ದಿನಗಳಿಂದ ನಡೆಯುತ್ತಿದ್ದ ಯೋಗ ತರಬೇತಿ ಶಿಬಿರದ ಅಂಗವಾಗಿ, ಭಾನುವಾರ (ಸೆ. 20) ಮಾತೃ ಧ್ಯಾನ, ಮಾತೃ ವಂದನಾ ಹಾಗೂ ಮಾತೃಭೋಜನ ಕಾರ್ಯಕ್ರಮಗಳನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಲಾಗಿತ್ತು.
ಮಡಂತ್ಯಾರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶಾಖೆಯಲ್ಲಿ ನಡೆದ ಈ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀಮತಿ ಸ್ಮಿತಾ ಅವರು ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಶ್ರೀ ಅಶೋಕ್ ಅವರು, "ಪ್ರತಿಯೊಬ್ಬರ ಜೀವನದಲ್ಲೂ ತಾಯಿಯ ಪಾತ್ರ ಅತ್ಯಂತ ಶ್ರೇಷ್ಠವಾದುದು. ಜನ್ಮ ನೀಡಿದ ಹೆತ್ತವರನ್ನು ಹಾಗೂ ಹಿರಿಯರನ್ನು ಸದಾ ಗೌರವದಿಂದ ಕಾಣುವುದು ನಮ್ಮ ಕರ್ತವ್ಯ" ಎಂದು ಕಿವಿಮಾತು ಹೇಳಿದರು.
ಇದೇ ವೇಳೆ ಮುಖ್ಯ ಅತಿಥಿಯಾಗಿ ಶ್ರೀಮತಿ ಧನಲಕ್ಷ್ಮಿ ಅವರು ಉಪಸ್ಥಿತರಿದ್ದರು. ಯೋಗ ಶಿಕ್ಷಕರು, ತರಬೇತಿ ಪಡೆದ ಯೋಗಪಟುಗಳು ಹಾಗೂ ಸಾರ್ವಜನಿಕರು ಸೇರಿದಂತೆ ಸುಮಾರು 130ಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು.
ವಿಶೇಷವಾಗಿ ಯೋಗಪಟುಗಳೇ ಸ್ವತಃ ತಯಾರಿಸಿ ತಂದಿದ್ದ ವಿವಿಧ ಭಕ್ಷ್ಯಗಳನ್ನು ಪರಸ್ಪರ ಕೈತುತ್ತು ನೀಡುವ ಮೂಲಕ ಭಾವನಾತ್ಮಕವಾಗಿ ‘ಮಾತೃಭೋಜನ’ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಅನುಪಮಾ ಸ್ವಾಗತ ಕೋರಿದರು. ಶ್ರೀಮತಿ ಪ್ರವಿತಾ ವರದಿ ವಾಚನ ಮಾಡಿದರು. ಶ್ರೀಮತಿ ತುಳಸಿ ಕಾರ್ಯಕ್ರಮ ನಿರೂಪಿಸಿದ್ದು, ಶ್ರೀಮತಿ ಆಶಾ ಧನ್ಯವಾದ ಸಮರ್ಪಿಸಿದರು.

