ದಕ್ಷಿಣ ಕನ್ನಡ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಕಮ್ಮಟದ ಪೂರ್ವತಯಾರಿ ಸಭೆ ಯಶಸ್ವಿ — ಭಜನಾ ಪರಿಷತ್ ಗ್ರಾಮ ಮಟ್ಟದಿಂದ ಬಲವರ್ಧನೆ



ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ (ಬೆಳ್ತಂಗಡಿ-ಗುರುವಾಯನಕೆರೆ ತಾಲೂಕು ಘಟಕ) ವತಿಯಿಂದ 28ನೇ ವರ್ಷದ ಭಜನಾ ಕಮ್ಮಟದ ಪೂರ್ವತಯಾರಿ ಹಾಗೂ ತಾಲೂಕು ಮಟ್ಟದ ಪರಿಷತ್ ಸಭೆಯು ಇಲ್ಲಿನ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ವಿಜೃಂಭಣೆಯಿಂದ ನಡೆಯಿತು.

​ಕಾರ್ಯಕ್ರಮವನ್ನು ಭಜನಾ ಪರಿಷತ್‌ನ ರಾಜ್ಯಾಧ್ಯಕ್ಷರಾದ ಪಿ. ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, "ಧರ್ಮಸ್ಥಳ ಭಜನಾ ಪರಿಷತ್ ಸಂಘಟನಾತ್ಮಕವಾಗಿ ಹಲವು ಸತ್ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದು, ಪ್ರಸ್ತುತ ಗ್ರಾಮ ಮಟ್ಟದಿಂದಲೂ ಬಲವರ್ಧನೆಗೊಳ್ಳುತ್ತಿದೆ. ಸಂಸ್ಥೆಯ ಈ ಬೆಳವಣಿಗೆಯಲ್ಲಿ ಪ್ರತಿಯೊಬ್ಬ ಭಕ್ತರ ಮತ್ತು ಪದಾಧಿಕಾರಿಗಳ ಸಹಕಾರ ಶ್ಲಾಘನೀಯ" ಎಂದು ಹೇಳಿದರು.

​ಇದೇ ವೇಳೆ, ಭಜನಾ ಪರಿಷತ್ತಿನ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು ಅವರು ಶೀಘ್ರದಲ್ಲೇ ನಡೆಯಲಿರುವ 28ನೇ ವರ್ಷದ ಭಜನಾ ಕಮ್ಮಟದ ರೂಪುರೇಷೆಗಳು ಹಾಗೂ ಆಯೋಜನೆಯ ಬಗ್ಗೆ ವಿವರವಾದ ಮಾಹಿತಿ ನೀಡಿದರು.

​ಸಭೆಯಲ್ಲಿ ಬೆಳ್ತಂಗಡಿ ಪರಿಷತ್ ಸ್ಥಾಪಕ ಅಧ್ಯಕ್ಷರಾದ ಮಂಜುನಾಥ್ ಶೆಟ್ಟಿ, ಬೆಳ್ತಂಗಡಿ ತಾಲೂಕು ಪರಿಷತ್ ಅಧ್ಯಕ್ಷರಾದ ರವಿರಾಜ್ ಚಾರ್ಮಾಡಿ, ಗುರುವಾಯನಕೆರೆ ತಾಲೂಕು ಭಜನಾ ಪರಿಷತ್ತಿನ ಅಧ್ಯಕ್ಷರಾದ ಜಗದೀಶ್ ಶೆಟ್ಟಿ ಮೈರ, ಯೋಜನಾಧಿಕಾರಿಗಳಾದ ಯಶೋಧರ್ ಹಾಗೂ ಹರೀಶ್, ಕಾರ್ಯದರ್ಶಿ ಚಂದ್ರಶೇಖರ್ ಸೇರಿದಂತೆ ವಿವಿಧ ವಲಯಗಳ ಪದಾಧಿಕಾರಿಗಳು ಹಾಗೂ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

​


ಸಭೆಯಲ್ಲಿ ಭಜನಾ ಪರಿಷತ್ತಿನ ಮುಂಬರುವ ಕಾರ್ಯಚಟುವಟಿಕೆಗಳು ಮತ್ತು ಕಾರ್ಯಕ್ರಮಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಯೋಜನಾಧಿಕಾರಿ ಯಶೋಧರ್ ಅವರು ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿದರೆ, ಕೃಷಿ ಮೇಲ್ವಿಚಾರಕರಾದ ರಾಮ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಯೋಜನಾಧಿಕಾರಿ ಹರೀಶ್ ವಂದನಾರ್ಪಣೆ ಸಲ್ಲಿಸಿದರು.



image