ಉಜಿರೆ: ಮಾನವ ಜನ್ಮವು ಅತ್ಯಂತ ಶ್ರೇಷ್ಠ ಹಾಗೂ ಅಪರೂಪದ್ದಾಗಿದೆ. ಕೇವಲ ಊಟ, ವಿಹಾರಕ್ಕಷ್ಟೇ ಜೀವನ ಸೀಮಿತವಾಗದೆ, ನೈತಿಕತೆ, ಕರುಣೆ ಮತ್ತು ಸತ್ಪ್ರೀತಿಯನ್ನು ಮೈಗೂಡಿಸಿಕೊಂಡು ಬಾಳುವುದೇ ನಿಜವಾದ ಜೀವನ ಎಂದು ವೇಣೂರು ಎಸ್.ಡಿ.ಎಂ ಐ.ಟಿ.ಐನ ಕಿರಿಯ ತರಬೇತಿ ಅಧಿಕಾರಿ ಪದ್ಮ ಪ್ರಸಾದ್ ಜೈನ್ ಹೇಳಿದರು.
ಇಲ್ಲಿನ ಎಸ್.ಡಿ.ಎಂ ಮಹಿಳಾ ಐ.ಟಿ.ಐ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ‘ಜೀವನ ಕೌಶಲ್ಯ’ ವಿಶೇಷ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಇಂದಿನ ತೀವ್ರ ಸ್ಪರ್ಧಾತ್ಮಕ ಯುಗದಲ್ಲಿ ಭೌತಿಕ ಸುಖ-ಸಂತೋಷಗಳಿಗೆ ನೀಡುತ್ತಿರುವಷ್ಟು ಪ್ರಾಮುಖ್ಯತೆಯನ್ನು ವ್ಯಕ್ತಿತ್ವ ಮತ್ತು ನೈತಿಕ ಮೌಲ್ಯಗಳಿಗೆ ನೀಡುತ್ತಿಲ್ಲ. ಪರಿಣಾಮವಾಗಿ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಯಾಗುತ್ತಿದೆ. ಸತ್ಯ, ಪ್ರಾಮಾಣಿಕತೆ, ಸಹನೆ ಹಾಗೂ ಪ್ರೀತಿಯಂತಹ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಪರಸ್ಪರ ವಿಶ್ವಾಸ ವೃದ್ಧಿಸಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
"ಮೌಲ್ಯಗಳಿಲ್ಲದ ಜೀವನವು ಬೇರಿಲ್ಲದ ಮರಕ್ಕೆ ಸಮಾನ. ಹೀಗಾಗಿ ಪ್ರತಿಯೊಬ್ಬರೂ ಸನ್ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಆರೋಗ್ಯಕರ ಹಾಗೂ ಸುಂದರ ಸಮಾಜದ ನಿರ್ಮಾಣಕ್ಕೆ ಕೊಡುಗೆ ನೀಡಬೇಕು" ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲರಾದ ವಿ. ಪ್ರಕಾಶ್ ಕಾಮತ್ ವಹಿಸಿದ್ದರು. ಈ ಸಂದರ್ಭದಲ್ಲಿ ಬೋಧಕ ವೃಂದದವರು ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
