ಕೇರಳ

ತಿರುನೆಲ್ವೇಲಿ: ಚಿಕನ್ ಬಿರಿಯಾನಿ ಜೊತೆ ಗಣೇಶನ ಫೋಟೋ: ತಮಿಳುನಾಡಿನಲ್ಲಿ ಅಂಗಡಿ ಮಾಲೀಕನ ಬಂಧನ!



ತಿರುನೆಲ್ವೇಲಿ: ಹಬ್ಬದ ಸಂದರ್ಭದಲ್ಲಿ ಗ್ರಾಹಕರನ್ನು ಆಕರ್ಷಿಸಲು ಗಣೇಶನು ಚಿಕನ್ ಬಿರಿಯಾನಿ ತಯಾರಿಸುತ್ತಿರುವಂತೆ ಚಿತ್ರಿಸಲಾಗಿದ್ದ ಬ್ಯಾನರ್ ಅಳವಡಿಸಿದ್ದ ಅಂಗಡಿ ಮಾಲೀಕನೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ತಮಿಳುನಾಡಿನ ತಿರುನೆಲ್ವೇಲಿಯಲ್ಲಿ ನಡೆದಿದೆ.

​ತಿರುನೆಲ್ವೇಲಿ-ತಿರುಚೆಂದೂರ್ ಮುಖ್ಯ ರಸ್ತೆಯ ವಿಎಂ ಛತ್ರಂ ಪ್ರದೇಶದಲ್ಲಿರುವ ‘ದಿಂಡಿಗಲ್ ಕಲ್ಯಾಣ ಬಿರಿಯಾನಿ’ ಹೋಲಿಕಾಂಗಡಿಯ ಹೊರಭಾಗದಲ್ಲಿ ಈ ವಿವಾದಾತ್ಮಕ ಬ್ಯಾನರ್ ಹಾಕಲಾಗಿತ್ತು. ಗಣೇಶ ಹಬ್ಬದ ಪ್ರಯುಕ್ತ ಉದ್ಯಮದ ಪ್ರಚಾರಕ್ಕಾಗಿ ಮಾಲೀಕ ಈ ರೀತಿ ಚಿತ್ರವನ್ನು ಬಳಸಿದ್ದ ಎನ್ನಲಾಗಿದೆ.

​ಈ ಬ್ಯಾನರ್‌ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ, ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಸ್ಥಳೀಯ ಸಾರ್ವಜನಿಕರು ಹಾಗೂ ಧಾರ್ಮಿಕ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದವು. ತಕ್ಷಣವೇ ಅಂಗಡಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದರು.

​ಈ ಕುರಿತು ನೆಲ್ಲೈ ನರಸಿಂಹನಲ್ಲೂರ್ ನಿವಾಸಿ ಸೆಲ್ವರಾಜ್ (42) ಎಂಬುವವರು ತಿರುನೆಲ್ವೇಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು, ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ. ಧಾರ್ಮಿಕ ನಂಬಿಕೆಗಳಿಗೆ ಅಪಮಾನ ಉಂಟುಮಾಡಿದ ಆರೋಪದ ಮೇಲೆ 'ಭಾರತೀಯ ನ್ಯಾಯ ಸಂಹಿತೆ'ಯ (BNS) ಸೆಕ್ಷನ್ 299ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.



image