
ಉಳ್ಳಾಲ: ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ಸಮಿತಿಯ ಮಾಜಿ ಉಪಾಧ್ಯಕ್ಷೆ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯೆಯಾಗಿರುವ ಡಾ. ಆರತಿ ಕೃಷ್ಣ ಅವರು ಪ್ರಸಿದ್ಧ ಕುತ್ತಾರು ಸ್ವಾಮಿ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿದರು.
ಕ್ಷೇತ್ರದ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ನಾನು ಕೊರಗಜ್ಜ ಸ್ವಾಮಿಯ ಸನ್ನಿಧಿಗೆ ಆಗಮಿಸುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಈ ಹಿಂದೆ ಕ್ಷೇತ್ರಕ್ಕೆ ಬಂದಾಗ ಮನಸ್ಸಿನಲ್ಲಿ ಅಂದುಕೊಂಡಿದ್ದ ಹರಕೆಯೊಂದು ಈಗ ಈಡೇರಿದೆ. ಹೀಗಾಗಿ ಸ್ವಾಮಿಯ ದರ್ಶನ ಪಡೆದು ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಮತ್ತೆ ಈ ಪುಣ್ಯಕ್ಷೇತ್ರಕ್ಕೆ ಬಂದಿದ್ದೇನೆ" ಎಂದು ತಮ್ಮ ಅನುಭವ ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಅವರು ಕ್ಷೇತ್ರದಲ್ಲಿ ವಿಶೇಷ ಪೂಜೆ ನೆರವೇರಿಸಿ, ಸಮಸ್ತ ನಾಡಿನ ಜನತೆಗೆ ಒಳಿತಾಗಲಿ ಹಾಗೂ ಸುಖ-ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದರು.
ಈ ಭೇಟಿಯ ವೇಳೆಯಲ್ಲಿ ಕುತ್ತಾರು ಸ್ವಾಮಿ ಕೊರಗಜ್ಜ ಕ್ಷೇತ್ರದ ಟ್ರಸ್ಟಿ ಮಹಾಬಲ ಹೆಗ್ಡೆ, ಡಾ. ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ಅಬ್ದುಲ್ ಶಕೀಲ್, ದೇರಳಕಟ್ಟೆ ಶ್ರೀ ಅಯ್ಯಪ್ಪ ದೇವಸ್ಥಾನದ ಆಡಳಿತಮೊತ್ತೇಸರ ಶರತ್ ಶೆಟ್ಟಿ ಮತ್ತು ಉಳ್ಳಾಲ ತಾಲೂಕು ಭೂ ನ್ಯಾಯಾಲಯ ಮಂಡಳಿಯ ಸದಸ್ಯ ರವಿರಾಜ್ ಶೆಟ್ಟಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.