ದಕ್ಷಿಣ ಕನ್ನಡ

Mangalore :ಶಕ್ತಿನಗರದಲ್ಲಿ ವೈಭವದ ‘ಹಿಂದೂ ಮಹಾ ಶಕ್ತಿ ಗಣಪತಿ ಉತ್ಸವ’ ಸಂಪನ್ನ: ವಿಜೃಂಭಣೆಯ ಶೋಭಾಯಾತ್ರೆ, ಜಲಸ್ತಂಭನ


ಮಂಗಳೂರು: ಶ್ರೀ ಗುರು ದತ್ತಾತ್ರೇಯ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಹಾಗೂ ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ-ದುರ್ಗಾವಾಹಿನಿ ಶ್ರೀ ವೈದ್ಯನಾಥ ಶಾಖೆಯ ಸಹಯೋಗದೊಂದಿಗೆ ಶಕ್ತಿನಗರದ ಛತ್ರಪತಿ ಶಿವಾಜಿ ವೃತ್ತದ ಸಮೀಪ ಪ್ರಥಮ ವರ್ಷದ 'ಹಿಂದೂ ಮಹಾ ಶಕ್ತಿ ಗಣಪತಿ ಉತ್ಸವ'ವು ಅತ್ಯಂತ ಶ್ರದ್ಧಾ-ಭಕ್ತಿ ಹಾಗೂ ಸಂಭ್ರಮದಿಂದ ನೆರವೇರಿತು.

​ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು:

ಸೋಮವಾರ ಬೆಳಿಗ್ಗೆ ಪ್ರಧಾನ ಅರ್ಚಕ ರಾಘವೇಂದ್ರ ಭಟ್ ಅವರ ಪೌರೋಹಿತ್ಯದಲ್ಲಿ ಗಣಪತಿ ವಿಗ್ರಹ ಪ್ರತಿಷ್ಠಾಪನೆ ಹಾಗೂ ಗಣಹೋಮ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದವು. ತದನಂತರ ಗಣ್ಯರು ಹಾಗೂ ಸಮಿತಿಯ ಪದಾಧಿಕಾರಿಗಳು ಉತ್ಸವಕ್ಕೆ ಅಧಿಕೃತ ಚಾಲನೆ ನೀಡಿದರು.

​ಉತ್ಸವದ ಅಂಗವಾಗಿ ವಿಎಚ್‌ಪಿ ಶ್ರೀಕೃಷ್ಣ ಬಾಲ ಸಂಸ್ಕಾರ ಕೇಂದ್ರದ ಮಕ್ಕಳು ಹಾಗೂ ಸ್ಥಳೀಯ ಮೂರು ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ಜರುಗಿತು. ಮಧ್ಯಾಹ್ನ ಮಹಾಪೂಜೆಯ ಬಳಿಕ ಸಂಜೆ ಬಾಲ ಸಂಸ್ಕಾರ ಕೇಂದ್ರದ ಬಾಲಕ-ಬಾಲಕಿಯರು ಮತ್ತು ಸ್ಥಳೀಯ ಉದಯೋನ್ಮುಖ ಪ್ರತಿಭೆಗಳಿಂದ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಪ್ರೇಕ್ಷಕರ ಮನಸೆಳೆದವು.ಧಾರ್ಮಿಕ ಸಭೆ ಹಾಗೂ ಬಹುಮಾನ ವಿತರಣೆ:

ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಸೀತಾರಾಮ ಶೆಟ್ಟಿ ವಹಿಸಿದ್ದರು. ಉದ್ಯಮಿ ಅವಿನಾಶ್ ಅಂಚನ್ ಕಾರ್ಯಕ್ರಮ ಉದ್ಘಾಟಿಸಿದರೆ, ವಿಎಚ್‌ಪಿ ನಾಗುರಿ ಪ್ರಖಂಡ ಕಾರ್ಯದರ್ಶಿ ಶರತ್ ಕೆಂಬಾರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ ಪುನೀತ್ ಅತ್ತಾವರ ಪ್ರಮುಖ ದಿಕ್ಸೂಚಿ ಭಾಷಣ ಮಾಡಿದರು. ಇದೇ ಸಂದರ್ಭದಲ್ಲಿ ಗಣೇಶ ಚತುರ್ಥಿಯ ಪ್ರಯುಕ್ತ ಆಯೋಜಿಸಲಾಗಿದ್ದ ಚಿತ್ರಕಲಾ ಸ್ಪರ್ಧೆಯ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

​ವೇದಿಕೆಯಲ್ಲಿ ವಿಎಚ್‌ಪಿ ಶ್ರೀಕೃಷ್ಣ ಬಾಲ ಸಂಸ್ಕಾರ ಕೇಂದ್ರದ ಮಾತಾಜಿ ರಮಾದೇವಿ, ವಿಎಚ್‌ಪಿ ಶ್ರೀ ವೈದ್ಯನಾಥ ಶಾಖೆಯ ಅಧ್ಯಕ್ಷ ಪ್ರಸಾದ್ ಕುಂಟಲ್ಪಾಡಿ ಹಾಗೂ ವಿವಿಧ ಪ್ರಕಲ್ಪಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

​ವಿಎಚ್‌ಪಿ ನಾಗುರಿ ಪ್ರಖಂಡ ಸಹ ಕಾರ್ಯದರ್ಶಿ ಮಾಲತಿ ಸ್ವಾಗತಿಸಿದರೆ, ಮಾತೃಶಕ್ತಿ-ದುರ್ಗಾವಾಹಿನಿಯ ಸುಮಲತಾ ಬಹುಮಾನಿತರ ಪಟ್ಟಿ ವಾಚಿಸಿದರು. ಸನ್ನಿಧಿ ಅಮೀನ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿದರು. ಧನುಷ್ ಕುಲಾಲ್ ಮತ್ತು ಶಕೀಲಾ ಕಾವ ಕಾರ್ಯಕ್ರಮದ ಸಂಯೋಜನೆ ನಿರ್ವಹಿಸಿದರು.ವೈಭವದ ಶೋಭಾಯಾತ್ರೆ, ವಿಸರ್ಜನೆ:

ಧಾರ್ಮಿಕ ಸಭೆಯ ನಂತರ ಛತ್ರಪತಿ ಶಿವಾಜಿ ವೃತ್ತದಿಂದ ಆರಂಭಗೊಂಡ ಭವ್ಯ ಶೋಭಾಯಾತ್ರೆಯಲ್ಲಿ ಮಕ್ಕಳ ಕುಣಿತ ಭಜನೆ ಹಾಗೂ ಬಿರುಸಿನ ಚೆಂಡೆ-ಸಿಂಗಾರಿ ಮೇಳದ ವಾದ್ಯಘೋಷಗಳು ನೆರೆದವರ ಗಮನಸೆಳೆದವು. ಶೋಭಾಯಾತ್ರೆಯು ಮುತ್ತಪ್ಪ ಗುಡಿ ದೇವಸ್ಥಾನದವರೆಗೆ ಸಾಗಿ, ಅಲ್ಲಿಂದ ಹಿಂತಿರುಗಿ ಬಿಕರ್ನಕಟ್ಟೆ, ಕೈಕಂಬ ಹಾಗೂ ಮರೋಳಿ ಮಾರ್ಗವಾಗಿ ಪಡೀಲ್ ಬೈರಾಡಿ ಕೆರೆಯನ್ನು ತಲುಪಿತು. ಕೆರೆಯ ದಂಡೆಯಲ್ಲಿ ಗಣಪತಿಗೆ ವಿಸರ್ಜನಾ ಪೂಜೆ ನೆರವೇರಿಸಿ, ವಿಗ್ರಹವನ್ನು ಜಲಸ್ತಂಭನಗೊಳಿಸುವುದರೊಂದಿಗೆ ಪ್ರಥಮ ವರ್ಷದ ಉತ್ಸವಕ್ಕೆ ಭಕ್ತಿಪೂರ್ವಕ ತೆರೆಬಿದ್ದಿತು.



image