ಬೆಳ್ತಂಗಡಿ: ತಾಲೂಕಿನ ಎಸ್.ಡಿ.ಎಂ ಮಹಿಳಾ ಐ.ಟಿ.ಐ ಆವರಣದಲ್ಲಿ ಶುಕ್ರವಾರ ಬೆಳ್ತಂಗಡಿಯ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗಾಗಿ ಹಲವು ಪ್ರಮುಖ ಸಾಮಾಜಿಕ ಹಾಗೂ ಆರೋಗ್ಯ ವಿಷಯಗಳ ಕುರಿತು ಜಾಗೃತಿ ಕಾರ್ಯಕ್ರಮ ಸಂಘಟಿಸಲಾಯಿತು.
ಎಸ್.ಡಿ.ಎಂ ಬಿ.ಎಡ್, ಡಿ.ಎಡ್ ಹಾಗೂ ಮಹಿಳಾ ಐ.ಟಿ.ಐ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಈ ಶಿಬಿರದಲ್ಲಿ ಕಣ್ಣಿನ ಆರೈಕೆ, ಅಂಗಾಂಗ ದಾನ, POSH ಹಾಗೂ POCSO ಕಾಯಿದೆ ಮತ್ತು ಸಾಂಕ್ರಾಮಿಕ ರೋಗಗಳ ತಡೆಗಟ್ಟುವಿಕೆ ಕುರಿತು ತಜ್ಞರು ಸುದೀರ್ಘ ಮಾಹಿತಿ ನೀಡಿದರು.
ಕಾಯಿದೆಗಳ ಅರಿವು ಅತ್ಯಗತ್ಯ: ಡಾ. ಜ್ಯೋತಿ ಉಲಿಪ್ಪಾಡಿ
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ. ಜ್ಯೋತಿ ಉಲಿಪ್ಪಾಡಿ ಅವರು, "ಸಮಾಜದಲ್ಲಿ ಸುರಕ್ಷತೆ ಹಾಗೂ ಕಾಯಿದೆಗಳ ಅರಿವು ಪ್ರತಿಯೊಬ್ಬ ವಿದ್ಯಾರ್ಥಿಗೂ ಇರಬೇಕು," ಎಂದು ಹೇಳುತ್ತಾ POSH (ಲೈಂಗಿಕ ಕಿರುಕುಳ ತಡೆ) ಹಾಗೂ POCSO (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ) ಕಾಯಿದೆಗಳ ಕುರಿತು ಸವಿಸ್ತಾರವಾಗಿ ವಿವರಣೆ ನೀಡಿದರು.
ದೃಷ್ಟಿ ಆರೈಕೆ ಹಾಗೂ ಅಂಗಾಂಗ ದಾನದ ಮಹತ್ವ
ಬೆಳ್ತಂಗಡಿ ಸರಕಾರಿ ಆರೋಗ್ಯ ಇಲಾಖೆಯ ಮುಖ್ಯ ಆಡಳಿತ ಅಧಿಕಾರಿ ಹಾಗೂ ಕಣ್ಣಿನ ತಜ್ಞರಾದ ಡಾ. ರಮೇಶ್ ಅವರು ದೃಶ್ಯ-ಶ್ರಾವ್ಯ (Video) ಮೂಲಕ ಕಣ್ಣಿನ ಮಹತ್ವ ಹಾಗೂ ಅದರ ಸೂಕ್ತ ಆರೈಕೆಯ ಕುರಿತು ಪ್ರಾತ್ಯಕ್ಷಿಕೆ ನೀಡಿದರು. ಬಳಿಕ ಮಾತನಾಡಿದ ಅಂಗ ಸಮನ್ವಯ ಅಧಿಕಾರಿ ಪದ್ಮಾವತಿ, ನೈಜ ಉದಾಹರಣೆಗಳ ಮೂಲಕ ಅಂಗಾಂಗ ದಾನದ ಶ್ರೇಷ್ಠತೆ, ಅದರ ಪ್ರಕ್ರಿಯೆ ಹಾಗೂ ಅಗತ್ಯತೆಯನ್ನು ಮನವರಿಕೆ ಮಾಡಿಕೊಟ್ಟರು.
ಇದೇ ವೇಳೆ ಹಿರಿಯ ಆರೋಗ್ಯ ಪರಿಶೀಲನಾ ಅಧಿಕಾರಿ ನವೀನ್ ಅವರು ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಲಕ್ಷಣ ಹಾಗೂ ನಿಯಂತ್ರಣ ಕ್ರಮಗಳ ಬಗ್ಗೆ ಸಂವಾದ ನಡೆಸಿ, ಉತ್ತಮ ಜೀವನಶೈಲಿಗೆ ಆದ್ಯತೆ ನೀಡುವಂತೆ ಸಲಹೆ ನೀಡಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಎ. ಅವರು ಮಹಿಳೆಯರ ಆರೋಗ್ಯ ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತು ಬೆಳಕು ಚೆಲ್ಲಿದರು.
ಕಾಲೇಜು ಆಡಳಿತ ಮಂಡಳಿಯಿಂದ ಸಾಥ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಬಿ.ಎಡ್ ಮತ್ತು ಡಿ.ಎಡ್ ಕಾಲೇಜಿನ ಪ್ರಾಂಶುಪಾಲ ಸಂತೋಷ್ ಸಲ್ದಾನ ಪ್ರಾಸ್ತಾವಿಕವಾಗಿ ಮಾತನಾಡಿ, ಇಂತಹ ಜಾಗೃತಿ ಕಾರ್ಯಕ್ರಮಗಳ ಅಗತ್ಯತೆಯನ್ನು ಬೆಳೆಸಿದರು. ಎಸ್.ಡಿ.ಎಂ ಮಹಿಳಾ ಐ.ಟಿ.ಐ ಕಾಲೇಜಿನ ಪ್ರಾಂಶುಪಾಲ ವಿ. ಪ್ರಕಾಶ್ ಕಾಮತ್ ಅಭ್ಯಾಗತರನ್ನು ಸ್ವಾಗತಿಸಿದರು.
ವೇದಿಕೆಯಲ್ಲಿ ವೇಣೂರು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪುಷ್ಪ ಹಾಗೂ ಆಪ್ತ ಸಮಾಲೋಚಕಿ ಶಿಲ್ಪ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವೀಕ್ಷಾ ನಿರೂಪಿಸಿದ ಕಾರ್ಯಕ್ರಮಕ್ಕೆ ಕಿರಿಯ ತರಬೇತಿ ಅಧಿಕಾರಿ ಸಂಧ್ಯಾ ವಂದಿಸಿದರು. ಸಂಸ್ಥೆಯ ಅಧ್ಯಾಪಕ ವೃಂದ ಹಾಗೂ ನೂರಾರು ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು.

